ಮಂಗಳೂರು :ಸಾಗರ ಮಾಲಾ ಯೋಜನೆ ಮೀನುಗಾರರ ಭವಿಷ್ಯವನ್ನು ಕರಾಳಗೊಳಿಸುತ್ತಿದೆ. ಕಾರವಾರದಿಂದ ಮಂಗಳೂರುವರಗೆ ಜಾರಿಗೊಳ್ಳುತ್ತಿರುವ ಸಾಗರ ಮಾಲಾ ಯೋಜನೆಯ ಪ್ರಾಜೆಕ್ಟ್ ಗಳು ಸ್ಥಳೀಯ ಮೀನುಗಾರರ ದುಡಿಮೆಯ ಅವಕಾಶಗಳನ್ನು ನಾಶಗೊಳಿಸುತ್ತಿರುವುದು ಯೋಜನೆ ಜಾರಿಯ ಆರಂಭದ ದಿನಗಳಲ್ಲೆ ಎದ್ದು ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇದು ಮೀನುಗಾರಿಕಾ ಉದ್ಯಮವನ್ನು ಸಾಂಪ್ರದಾಯಿಕವಾಗಿ ಮೀನುಗಾರಿಕೆಯನ್ನೇ ಅವಲಂಬಿಸಿರುವ ಸಮುದಾಯಗಳಿಂದ ಕಿತ್ತುಕೊಂಡು, ಕಾರ್ಪೊರೇಟ್ ಕಂಪೆನಿಗಳ ಪಾಲಾಗಿಸುವ ಹುನ್ನಾರವನ್ನು ಹೊಂದಿದೆ ಎಂದು "ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ" ದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು.
ಅವರು ಮಂಗಳೂರಿನ ಬೆಂಗರೆಯಲ್ಲಿ ಸಾಗರ ಮಾಲಾ, ಕೋಸ್ಟಲ್ ಬರ್ತ್ ಯೋಜನೆಯ ವಿರುದ್ದ "ಪಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘ" ಹಮ್ಕಿಕೊಂಡಿದ್ದ "ದೋಣಿಯೊಂದಿಗೆ ಮೀನುಗಾರರ ಪ್ರತಿಭಟನೆ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದರು. ಮುಂದುವರಿದು ಅವರು, ಬೆಂಗರೆ ಪ್ರದೇಶದಲ್ಲಿ ಐನೂರಕ್ಕೂ ಹೆಚ್ಚು ನಾಡದೋಣಿಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಸಾಗರ ಮಾಲಾ, ಕೋಸ್ಟಲ್ ಬರ್ತ್ ಯೋಜನೆ ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ನಾಶಗೊಳಿಸುತ್ತಿದೆ. ಮೀನುಗಾರರು ನಾಡದೋಣಿ ಕಟ್ಟುವ ನದಿ ದಂಡೆಗಳನ್ನು ಆಕ್ರಮಿಸಿ ಅತಂತ್ರಗೊಳಿಸುತ್ತಿದೆ. ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆಯನ್ನೇ ಅವಲಂಬಿಸಿರುವ ನೂರಾರು ಮೀನುಗಾರ ಕುಟುಂಬಗಳು ಬದುಕಿನ ನೆಲೆ
ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸಾಗರ ಮಾಲಾ, ಕೋಸ್ಟಲ್ ಬರ್ತ್ ಯೋಜನೆಗೆ ಸಂಬಂಧಿಸಿ ಸ್ಥಳೀಯ ಜನರಿಗೆ ಮಾಹಿತಿಯನ್ನೇ ನೀಡದೆ ಜನರ ಮೇಲೆ ಹೇರಲಾಗಿದೆ. ಇನ್ನಷ್ಟು ಯೋಜನೆಗಳು ಬೆಂಗರೆಯ ನದಿ, ಸಮುದ್ರ ದಂಡೆಯಲ್ಲಿ ತರಲು ಸರಕಾರ ಪ್ರಸ್ತಾವನೆ ಸಿದ್ದಪಡಿಸಿಕೊಂಡಿದೆ. ಈ ಎಲ್ಲಾ ಸಂದರ್ಭದಲ್ಲಿ ಮೀನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿರುವ ಗ್ರಾಮಸ್ಥರನ್ನು ಕತ್ತಲಲ್ಲಿ ಇಡಲಾಗಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಆರೋಪಿಸಿದ ಅವರು, ಇದರ ವಿರುದ್ದ ಮೀನುಗಾರಿಕಾ ವೃತ್ತಿ ನಿರತ ಜನರು ಜಾತಿ, ಧರ್ಮಗಳ ಭೇದ ಮರೆತು ಮೀನುಗಾರ ಸಮುದಾಯವಾಗಿ ಪ್ರತಿರೋಧ ಒಡ್ಡಬೇಕು ಎಂದು ಹೇಳಿದರು.















