ಗಾಜಾ : ಹಮಾಸ್ ಉಗ್ರರ ಹುಟ್ಟಡಗಿಸಲು ದಾಳಿ ತೀವ್ರಗೊಳಿಸಿರುವ ಇಸ್ರೇಲ್, ಭಾನುವಾರ ಗಾಜಾಪಟ್ಟಿಯ ಉತ್ತರ ಭಾಗ, ಸಿರಿಯಾ ಹಾಗೂ ವೆಸ್ಟ್ ಬ್ಯಾಂಕ್ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಅಕ್ಟೋಬರ್ 7ರ ಇಸ್ರೇಲ್ ಮೇಲಿನ ದಾಳಿಯನ್ನು ಮುನ್ನಡೆಸಿದ್ದ ಹಮಾಸ್‌ನ ಇಬ್ಬರು ಕಮಾಂಡರ್‌ಗಳು ಹತ್ಯೆಯಾಗಿದ್ದಾರೆ. ಅಲ್ಲದೆ, ಸಿರಿಯಾದ ಎರಡು ವಿಮಾನ ನಿಲ್ದಾಣಗಳು ಕೂಡ ಮತ್ತೆ ಇಸ್ರೇಲ್ ದಾಳಿಯಿಂದ ಧಕ್ಕೆಗೀಡಾಗಿವೆ. ಇದೇ ವೇಳೆ, ಪಶ್ಚಿಮ ದಂಡೆಯಲ್ಲಿ ಉಗ್ರರು ಬಳಸುತ್ತಿದ್ದ ಒಂದು ಮಸೀದಿಯನ್ನೂ ಧ್ವಂಸಗೊಳಿಸಲಾಗಿದೆ.
ಈ ದಾಳಿಯ ಬೆನ್ನಲ್ಲೇ ಉತ್ತರ ಗಾಜಾ ತೊರೆದು ದಕ್ಷಿಣಕ್ಕೆ ತೆರಳುವಂತೆ ಪ್ಯಾಲೆಸ್ತೀನೀಯರಿಗೆ ಇಸ್ರೇಲ್ ಸೇನಾಪಡೆಗಳು ‘ಅರ್ಜೆಂಟ್ ವಾರ್ನಿಂಗ್’ ನೀಡಿವೆ. ಉತ್ತರ ಗಾಜಾ ತೊರೆಯದಿದ್ದರೆ ನಿಮ್ಮನ್ನೂ ಭಯೋತ್ಪಾದಕರೆಂದು ಪರಿಗಣಿಸಿ ನಿರ್ಮೂಲನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿವೆ.
ಗಾಜಾ ಮೇಲೆ ಶನಿವಾರ ರಾತ್ರಿಯಿಡೀ ಇಸ್ರೇಲ್ ಪಡೆಗಳು ವಾಯು ದಾಳಿ ನಡೆಸಿವೆ. ಅದೇ ವೇಳೆ, ಸಿರಿಯಾ ಹಾಗೂ ವೆಸ್ಟ್ ಬ್ಯಾಂಕ್ ಮೇಲೂ ನಿರಂತರ ದಾಳಿ ನಡೆದಿದ್ದು, ಹಮಾಸ್ ಜೊತೆಗಿನ
ಇಸ್ರೇಲ್ ಯುದ್ಧವು ಇದೀಗ ಅಕ್ಕಪಕ್ಕದ ದೇಶಗಳ ಜೊತೆಗೆ ಗಡಿ ಸಂಘರ್ಷವಾಗಿಯೂ ಮಾರ್ಪಡುವ ಸುಳಿವು ದೊರೆತಿದೆ.
ಗಾಜಾ ಗಡಿಯಲ್ಲಿ ಈಗಲೂ ಹತ್ತಾರು ಸಾವಿರ ಇಸ್ರೇಲಿ ಸೈನಿಕರು ಹಾಗೂ ಯುದ್ಧ ಟ್ಯಾಂಕ್‌ಗಳು ಬೀಡುಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಭೂದಾಳಿ ನಡೆಸಬಹುದು ಎಂದು ಹೇಳಲಾಗುತ್ತಿದೆ. ಆ ಕಾರಣಕ್ಕಾಗಿಯೇ ಉತ್ತರ ಗಾಜಾ ತೊರೆಯದಿದ್ದರೆ ನಿಮ್ಮನ್ನೂ ಭಯೋತ್ಪಾದಕರೆಂದು ಪರಿಗಣಿಸಿ ದಾಳಿ ನಡೆಸುತ್ತೇವೆ ಎಂದು ಇಸ್ರೇಲ್ ಸೇನಾಪಡೆಗಳು ‘ಅರ್ಜೆಂಟ್ ವಾರ್ನಿಂಗ್’ ನೀಡಿವೆ ಎಂದು ಹೇಳಲಾಗಿದೆ.















