ಕಳೆದ ಒಂಬತ್ತು ತಿಂಗಳುಗಳಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳುವ ಬಗ್ಗೆ ಸಾಕಷ್ಟು ಕುತೂಹಲವಿದೆ. ಕೇವಲ 8 ದಿನಗಳ ಕಾರ್ಯಾಚರಣೆಗಾಗಿ ಜೂನ್ 6 ರಂದು ISSಗೆ ಹೋದ ಈ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆಯಿಂದಾಗಿ 9 ತಿಂಗಳ ಕಾಲ ಅಲ್ಲಿಯೇ ಕಳೆಯಬೇಕಾಯಿತು. ಸದ್ಯ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದ ಹೊಸ ತಂಡವನ್ನು ಸ್ವಾಗತಿಸಿದ್ದಾರೆ. ಕ್ರೂ-10 ಸದಸ್ಯರನ್ನು ಸುನಿತಾ ವಿಲಿಯಮ್ಸ್ ಸ್ವಾಗತಿಸಿದ ದೃಶ್ಯಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಹೊಸ ತಂಡವನ್ನು ಸ್ವಾಗತ ಕೋರಿದ ಸುನೀತಾ: ಭೂಮಿಯಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಈಗ ಸಂಶೋಧನೆಯ ಹೊಸ ಅಧ್ಯಾಯ ಶುರುವಾಗಿದೆ . ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಗಗನನೌಕೆಯಲ್ಲಿ ನಾಸಾ ಕಳುಹಿಸಿದ ಕ್ರೂ-10 ತಂಡವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದೆ. ಐಎಸ್‌ಎಸ್‌ನ ಪ್ರಮುಖ ಸದಸ್ಯೆ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ನಿಲ್ದಾಣಕ್ಕೆ ಬಂದ ಹೊಸ ಅತಿಥಿಗಳನ್ನು ಸ್ವಾಗತಿಸಿದ್ದಾರೆ. ಕ್ರೂ-10 ಸದಸ್ಯರನ್ನು ಸುನಿತಾ ವಿಲಿಯಮ್ಸ್ ಸ್ವಾಗತಿಸಿದ ದೃಶ್ಯಗಳನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಗಗನನೌಕೆಯಲ್ಲಿ ಆಗಮಿಸಿದ ನಾಲ್ವರು ಸದಸ್ಯರ ಕ್ರೂ-10 ತಂಡವು ಭಾನುವಾರ ಬೆಳಗ್ಗೆ 12.35ಕ್ಕೆ ಹ್ಯಾಚ್ ತೆರೆದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿತು. ನಾಸಾದ ಗಗನಯಾತ್ರಿಗಳಾದ ಆ್ಯನಿ ಮೆಕ್ಲೈನ್, ನಿಕೋಲ್ ಅಯ್ಯರ್ಸ್ ಮತ್ತು ಜಪಾನಿನ ಬಾಹ್ಯಾಕಾಶ ಸಂಸ್ಥೆಯ ತಕುಯಾ ಒನಿಷಿ, ರಷ್ಯಾದ ರೋಸ್‌ಕಾಸ್ಮೊಸ್‌ನ ಕಿರಿಲ್ ಪೆಸ್ಕೋವ್ ಕ್ರೂ-10 ಮಿಷನ್ನಲ್ಲಿದ್ದಾರೆ. ನಿಲ್ದಾಣದಲ್ಲಿರುವ ಎಕ್ಸ್‌ಪೆಡಿಷನ್ 72 ತಂಡದ ನಾಸಾದ ನಿಕ್ ಹೇಗ್, ಡಾನ್ ಪೆಟಿಟ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರೋಸ್‌ಕಾಸ್ಮೊಸ್‌ನ ಅಲೆಕ್ಸಾಂಡರ್ ಗೊರ್ಬುನೋವ್,
ಅಲೆಕ್ಸಿ ಒವ್‌ಚಿನಿನ್, ಇವಾನ್ ವಾಗ್ನರ್ ಇವರನ್ನು ಸ್ವಾಗತಿಸಿದರು. ನಿಲ್ದಾಣದ ಕಮಾಂಡರ್ ಆಗಿದ್ದ ಹಿರಿಯ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಈ ಸ್ವಾಗತಕ್ಕೆ ನೇತೃತ್ವ ವಹಿಸಿದ್ದರು.
ಗಗನಯಾತ್ರಿಗಳಿಬ್ಬರು ಭೂಮಿಗೆ ಬರೋದು ಯಾವಾಗ?:
ನಾಸಾ ಅಧಿಕಾರಿಗಳು ಮತ್ತು ಸ್ಪೇಸ್‌ಎಕ್ಸ್ ಎಂಜಿನಿಯರ್‌ಗಳು ಈ ಇಬ್ಬರು ಗಗನಯಾತ್ರಿಗಳ ಆಗಮಕ್ಕೆ ಸಿದ್ಧತೆ ಮಾಡಿಕೊಂಡಾಗೆಲ್ಲ ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಅವರ ಆಗಮನವು ಮತ್ತಷ್ಟು ವಿಳಂಬವಾಗುತ್ತಿತ್ತು. ಅವರಿಬ್ಬರನ್ನು ಭೂಮಿಗೆ ಮರಳಿ ತರುವ ಈ ಪ್ರಯತ್ನದ ಭಾಗವಾಗಿ ಮಾರ್ಚ್ 13 ರ ಬುಧವಾರದಂದು ಕ್ರೂ-10 ಕಾರ್ಯಾಚರಣೆಯನ್ನು ಪ್ರಾರಂಭಿಸಲು ಎಲ್ಲವೂ ಸಿದ್ಧವಾಗಿತ್ತು. ಆದರೂ ಈ ಕಾರ್ಯಾಚರಣೆಯು ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು. ಹೀಗಾಗಿ ಪ್ರಯೋಗವನ್ನು ಮತ್ತೆ ಸ್ಥಗಿತಗೊಳಿಸಲಾಗಿತ್ತು. ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ ಕ್ರೂ-10 ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ನಾಸಾ ತಿಳಿಸಿತ್ತು. ಈ ಮಿಷನ್ ಹಲವು ಬಾರಿ ವಿಳಂಬವಾಗಿರುವುದರಿಂದ ಈ ಇಬ್ಬರು ಗಗನಯಾತ್ರಿಗಳು ಯಾವಾಗ ಭೂಮಿಗೆ ಹಿಂತಿರುಗುತ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಆದರೂ ನಾಸಾ ಇತ್ತೀಚೆಗೆ ಅವರ ಆಗಮನದ ಕುರಿತು ಮತ್ತೊಂದು ಅಪ್ಡೇಟ್ ನೀಡಿತ್ತು. ಯೋಜಿಸಿದಂತೆ ಮಾರ್ಚ್ 19 ರಂದು ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಡಲಿದ್ದಾರೆ ಎಂದು ನಾಸಾ ಘೋಷಿಸಿದೆ.














