BMRCL (ನಮ್ಮ ಮೆಟ್ರೋ) ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ: ಕೇಂದ್ರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ; ಹೈಕೋರ್ಟ್​ ಮಹತ್ವದ ತೀರ್ಪು

Coastal Bulletin
BMRCL (ನಮ್ಮ ಮೆಟ್ರೋ) ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ: ಕೇಂದ್ರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ; ಹೈಕೋರ್ಟ್​ ಮಹತ್ವದ ತೀರ್ಪು

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅತ್ಯವಶ್ಯಕ ಸೇವೆ ವ್ಯಾಪ್ತಿಗೊಳಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ ಎಂದು ಹೈಕೋರ್ಟ್ (High Court) ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ಆ ಮೂಲಕ 2017ರ ಜುಲೈ 7ರ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಕೈಗಾರಿಕಾ ವಿವಾದ ಕಾಯ್ದೆಯಡಿ ಎಸ್ಮಾ ಜಾರಿ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಬಿಎಂಆರ್‌ಸಿಎಲ್ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ವಾದ ಪ್ರತಿವಾದ ಆಲಿಸಿದ ಏಕಸದಸ್ಯ ಪೀಠ, ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 2(n)(vi) ಅಡಿಯಲ್ಲಿ ಬಿಎಂಆರ್‌ಸಿಎಲ್ ಸೇವೆಗಳನ್ನು ಸಾರ್ವಜನಿಕ ಉಪಯುಕ್ತತೆ ಸೇವೆ ಎಂದು ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯ ಸೆಕ್ಷನ್ 2(1) ಅಡಿಯಲ್ಲಿ

ಅಗತ್ಯ ಸೇವೆ ಎಂದು ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಬಿಎಂಆರ್‌ಸಿಎಲ್‌ ಪ್ರತ್ಯೇಕ ಕಂಪನಿಯಲ್ಲ, ರೈಲ್ವೆ ಕಂಪನಿ. ಹೀಗಾಗಿ ಕೇಂದ್ರ ಸರ್ಕಾರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.

ಬಿಎಂಆರ್‌ಸಿಎಲ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಶೇ 50 ರಷ್ಟು ಪಾಲನ್ನು ಹೊಂದಿವೆ. ಆದಾಗ್ಯೂ, ಪ್ರಮುಖ ಆಡಳಿತಾತ್ಮಕ ಕ್ರಮಗಳಲ್ಲಿ ಅಂತಿಮ ನಿರ್ಧಾರ ಕೇಂದ್ರ ಸರ್ಕಾರದದ್ದಾಗಿದ್ದು, ಕೆಲವು ನಿರ್ಣಾಯಕ ಆಡಳಿತಾತ್ಮಕ ನಿರ್ಧಾರಗಳಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಅನುಮೋದನೆಗಳು ಅಥವಾ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ ಎಂದು ಪೀಠ ಹೇಳಿದೆ.

Leave a Comment