ಬೆಂಗಳೂರು: ಕಾಂಪೌಂಡ್‌ಗೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗೋಡೆ ಕುಸಿದು ಪುಟಾಣಿ ಕಂದ ಸಾವನ್ನಪ್ಪಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಮಗುವನ್ನು 1 ವರ್ಷ 8 ತಿಂಗಳಷ್ಟೇ ತುಂಬಿದ್ದ ಪ್ರಣವ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಮನೆ ಮುಂದೆ ದಾಟಿ ಹೋಗುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿಗೆ ವಿದ್ಯುತ್ ವೈರ್ ಸಿಲುಕಿದ ಪರಿಣಾಮ ಅದು ನಿಯಂತ್ರಣ ಕಳೆದುಕೊಂಡು ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾಂಪೌಂಡ್ ಗೋಡೆ ಕುಸಿದು ಬಿದ್ದು, ಮಗು ಸಾವನ್ನಪ್ಪಿದೆ. ನವಂಬರ್ 7 ಸಂಜೆ ಸಿಮೆಂಟ್ ಮಿಕ್ಸರ್ ಲಾರಿಯೊಂದು ಮನೆಯೊಂದರ ಮೌಲ್ಡಿಂಗ್ ಕೆಲಸ ಮುಗಿಸಿ ವಾಪಸ್ ಹೋಗುತ್ತಿತ್ತು. ಈ ವೇಳೆ
ಮೇಲೆ ಹಾದು ಹೋಗಿರುವ ವಿದ್ಯುತ್ ವೈರ್ ಲಾರಿಗೆ ಸಿಲುಕಿದೆ. ಕೂಡಲೇ ಅಲ್ಲಿದ್ದವರೆಲ್ಲರೂ ಕೂಗಿಕೊಂಡಿದ್ದಾರೆ. ಆದರೆ ಚಾಲಕನ ಗಮನಕ್ಕೆ ಇದು ಬಂದಿಲ್ಲ, ಆತ ಲಾರಿ ಚಾಲಾಯಿಸಿಕೊಂಡು ಮುಂದೆ ಹೋದಾಗ ವೈರಿಂಗ್ ಕಂಬ ಕಿತ್ತು ಬಂದಿದ್ದಲ್ಲದೇ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮನೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗೋಡೆ ಕುಸಿದು ಆಟ ಆಡ್ತಿದ್ದ ಮಗುವಿನ ಮೇಲೆ ಬಿದ್ದು ಮಗು ಸಾವನ್ನಪ್ಪಿದೆ.
















