ನವದೆಹಲಿ: ಇತ್ತೀಚೆಗಷ್ಟೇ ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ನಡೆದಿದ್ದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ರಾಜಧಾನಿ ದೆಹಲಿಯಲ್ಲಿ (New Delhi) ಮತ್ತೊಂದು ಬೃಹತ್ ಬುಲ್ಡೋಜರ್ ಕಾರ್ಯಾಚರಣೆ ನಡೆದಿದೆ.
ಇದೇ ಜನವರಿ 6 ಮತ್ತು 7ರ ಮಧ್ಯರಾತ್ರಿ (ಬುಧವಾರ ರಾತ್ರಿ) 1 ಗಂಟೆ ಸುಮಾರಿಗೆ ದೆಹಲಿಯ ತುರ್ಕಮನ್ ಗೇಟ್‌ನಲ್ಲಿರುವ ಫೈಜ್-ಎ-ಇಲಾಹಿ ಮಸೀದಿ (Faiz-e-Elahi mosque) ಬಳಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದೆ. ದೆಹಲಿ ಹೈಕೋರ್ಟ್ (Delhi High Court) ಆದೇಶದಂತೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಅಧಿಕಾರಿಗಳು ಮಸೀದಿ ಮತ್ತು ಸುತ್ತಮುತ್ತಲಿನ ಕಟ್ಟಡಗಳನ್ನ ಧ್ವಂಸಗೊಳಿಸಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಬುಲ್ಡೋಜರ್‌ಗಳಿಂದ ಕಾರ್ಯಾಚರಣೆ ನಡೆಸಲಾಗಿದೆ.
ಪಾಲಿಕೆ ಅಧಿಕಾರಿಗಳ ಈ ಕಾರ್ಯಾಚರಣೆಯನ್ನು ಸ್ಥಳೀಯ ನಿವಾಸಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ತೆರವು ಕಾರ್ಯಾಚರಣೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿ ಪ್ರತಿಭಟಿಸಿದ್ದಾರೆ.
ಈ ವೇಳೆ ಗುಂಪಿನಲ್ಲಿದ್ದ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಸದ್ಯ ಅಲ್ಲಿನ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಹೆಚ್ಚಿನ ಪೊಲೀಸ್ ಭದ್ರತೆಯನ್ನ ನಿಯೋಜಿಸಲಾಗಿದೆ.
ಐವರು ಪೊಲೀಸರಿಗೆ ಗಾಯ
ಇನ್ನೂ ಕಲ್ಲುತೂರಾಟದ ವೇಳೆ ನಡೆದ ಘರ್ಷಣೆಯಲ್ಲಿ ಐವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಡಿಸಿಪಿ ತಿಳಿಸಿದ್ದಾರೆ. ಘಟನೆಗೆ ಕಾರಣರಾದವರನ್ನ ಗುರುತಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಏನೇನು ಧ್ವಂಸ?
ಒತ್ತುವರಿ ತೆರವು ಕಾರುಆಚರಣೆ ವೇಳೆ ಮಸೀದಿ ಬಳಿಯಿದ್ದ ಮದುವೆ ಮಂಟಪ, 2 ಬೃಹತ್ ಮಳಿಗೆಗಳು, ಮೂರು ಫಾರ್ಮಸಿ, ಸೇರಿದಂತೆ ಸುತ್ತಮುತ್ತಲಿನ ಅನೇಕ ಕಟ್ಟಡಗಳನ್ನ ತೆರವುಗೊಳಿಸಲಾಯಿತು.










