ಬಂಟ್ವಾಳ: ನಾಯಕತ್ವ ಗುಣವನ್ನು ಹನುಮಂತನನ್ನು ನೋಡಿ ಕಲಿಯಬೇಕು, ಹನುಮ ಶಕ್ತಿಯೊಂದಿಗೆ ಸನಾತನ ಧರ್ಮದ ಉಳಿವಿಗೆ ಧಾರ್ಮಿಕ ಆಚರಣೆಗಳ ಮೂಲಕ ಸಂಘಟನೆ ಬಲಪಡಿಸುವ ಅನಿವಾರ್ಯತೆ ಇದೆ ಎಂದು ಒಡಿಯೂರು ಶ್ರೀ ಗುರುದೇವಾದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಸುಜೀರು ದತ್ತನಗರದ ಶ್ರೀ ವೀರಹನುಮಾನ್ ಮಂದಿರದ 24ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ,ಈ ತುಳುನಾಡು ಹೆಮ್ಮೆಯ ನಾಡು, ಪುಣ್ಯ ಭೂಮಿ, ಇಲ್ಲಿನ ಜನರು ಪ್ರಾಮಾಣಿಕರು ನಮ್ಮಿಂದ ಸತ್ಕಾರ್ಯಗಳು ಆಗಬೇಕಿದೆ,ಆದ್ಯಾತ್ಮಿಕ ಮಾರ್ಗದಲ್ಲಿ ನಡೆದರೆ ಯಾವುದೇ ಗೊಂದಲಗಲಿಲ್ಲದೆ ಜೀವನ ಸಮನ್ವತೆಯಲ್ಲಿ ಸಾಗುತ್ತದೆ. ಮುಂದಿನ ಬೆಳ್ಳಿ ಹಬ್ಬದ ಸಂಭ್ರಮದ ವೇಳೆಗೆ ಸುಸಜ್ಜಿತ ಸಭಾಭವನ ಎಲ್ಲರ ಸಹಕಾರದಿಂದ ನಿರ್ಮಾಣವಾಗಲಿ ಎಂದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮಾತನಾಡಿ ಎಲ್ಲರೂ ಒಟ್ಟುಗೂಡಿ ಮಂದಿರ ಬೆಳವಣಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ,ಮುಜುರಾಯಿ ಇಲಾಖೆಯಿಂದ ಸಿಗುವ ಅನುದಾನದಡಿ ಮಂದಿರದ ಅಭಿವೃದ್ದಿಗೆ 5 ಲಕ್ಷ ಮೀಸಲಿಡುವುದಾಗಿ ತಿಳಿಸಿದರು.
ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ
ಯೋಜನೆ ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಮಾತನಾಡಿದರು.
ವೇದಿಕೆಯಲ್ಲಿ ಇಂಜಿನಿಯರ್ ಅಕ್ಷಯ್ ಅರ್ಕುಳ, ಉದ್ಯಮಿ ಜಗದೀಶ್ ರೈ,ಮಂದಿರದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಉತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ದತ್ತ ನಗರ, ಮಹಿಳಾ ಸೇವಾ ಬಳಗದ ಅಧ್ಯಕ್ಷೆ ಮೀನಾಕ್ಷಿ ಉಪಸ್ಥಿತರಿದ್ದರು.
ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಅಮೀನ್ ದತ್ತನಗರ ಸ್ವಾಗತಿಸಿ ದಾಮೋದರ ಸಪಲ್ಯ ವಂದಿಸಿದರು. ರಮ್ಯ ರಂಜನ್ ಸುಜೀರು ಕಾರ್ಯಕ್ರಮ ನಿರೂಪಿಸಿದರು.ಪ್ರ ಕಾರ್ಯದರ್ಶಿ ಗಣೇಶ್ ಎಸ್ ಸಹಕರಿಸಿದರು.
ಬೆಳಿಗ್ಗೆ ಪೊಳಲಿ ಗಿರಿಪ್ರಕಾಶ್ ತಂತ್ರಿ ಇವರ ನೇತೃತ್ವದಲ್ಲಿ ಗಣಹೋಮ, ಪಂಚಾಮೃತ ಅಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.
ರಾತ್ರಿ 9.00ರಿಂದ ಬಪ್ಪನಾಡು ಮೇಳದವರಿಂದ ಸ್ವಾಮಿ ಭಕ್ತ ಮಂಜಣ್ಣೆ ಯಕ್ಷಗಾನ ಬಯಲಾಟ ನಡೆಯಲಿದೆ.











