Coastal Bulletin

ಜೋಧ್ ಪುರ: ನಮಾಜ್ ಮಾಡುವ ಪ್ರದೇಶದ ಬಳಿ ಪರಶುರಾಮನ ಧ್ವಜವನ್ನು ಹಾರಿಸಲಾಗಿತ್ತು. ಸ್ಥಳೀಯ ಮುಸ್ಲಿಂ ಸಮುದಾಯದವರು ಈದ್ ಸಂದರ್ಭದಲ್ಲಿ ಈ ಧ್ವಜವನ್ನು ತೆಗೆದುಹಾಕುವ ಬಗ್ಗೆ ವಿವಾದ ಭುಗಿಲೆದ್ದು ಎರಡು ಭಿನ್ನ ಕೋಮುಗಳ ಮಧ್ಯೆ ಘರ್ಷಣೆಯಾಗಿದೆ ಎಂದು ವರದಿಯಾಗಿದೆ.

ಸೋಮವಾರ ತಡರಾತ್ರಿ ಜೋಧ್‌ಪುರದ  ಜಲೋರಿ ಗೇಟ್ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯ ಮೇಲೆ ಧ್ವಜಾರೋಹಣ ಮಾಡುವ ಕುರಿತು ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಈ ಘರ್ಷಣೆಯ ಬಳಿಕ ಕಲ್ಲು ತೂರಾಟ ಕೂಡ ನಡೆದಿದೆ. ಈ ಘಟನೆಯಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದು, ಜೋಧ್​ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು  ಸ್ಥಗಿತಗೊಳಿಸಲಾಗಿದೆ.

ಸೋಮವಾರ ರಾತ್ರಿ 11.10ಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈದ್ ದಿನದಂದೇ ಪರಶುರಾಮ ಜಯಂತಿಯಂದು ಹಾಕಲಾಗಿದ್ದ ಧ್ವಜಗಳ ವಿಚಾರವಾಗಿ ಘರ್ಷಣೆ ಆರಂಭವಾಗಿದೆ. ನಮಾಜ್ ಮಾಡುವ ಪ್ರದೇಶದ ಬಳಿ ಪರಶುರಾಮನ ಧ್ವಜವನ್ನು ಹಾರಿಸಲಾಗಿತ್ತು.

ಸ್ಥಳೀಯ ಮುಸ್ಲಿಂ ಸಮುದಾಯದವರು ಈದ್ ಸಂದರ್ಭದಲ್ಲಿ ಈ ಧ್ವಜವನ್ನು ತೆಗೆದುಹಾಕುವ ಬಗ್ಗೆ ವಿವಾದ ಉಂಟಾಗಿದೆ ಎಂದು ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಹೇಳಿದ್ದಾರೆ.

ಈ ಪ್ರದೇಶವು ಈದ್ಗಾದ ಪಕ್ಕದಲ್ಲಿರುವುದರಿಂದ ಮತ್ತು ಈದ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮಾಜ್ ಮಾಡುವ ಸಾಧ್ಯತೆಯಿರುವುದರಿಂದ ಪೊಲೀಸ್ ಕಮಿಷನರ್ ಮಧ್ಯಪ್ರವೇಶಿಸಿ ಸ್ಥಳದ ಸಮೀಪಕ್ಕೆ ಜನರನ್ನು ಬರಲು ಬಿಡಲಿಲ್ಲ. ಆದರೆ, ಜನರನ್ನು ಚದುರಿಸುವಾಗ ಉದ್ವಿಗ್ನತೆ ಹೆಚ್ಚಾಗಿ, ಕಲ್ಲು ತೂರಾಟ ನಡೆಯಿತು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಜೋಧ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Comment