ಮಂಗಳೂರು:ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಸೋಂಕು ಇಳಿಕೆ ಬೆನ್ನಲ್ಲೇ ಇದೀಗ ರೂಪಾಂತರಿ ಸೋಂಕಿನ ಕಾಟ ಶುರುವಾಗಿದೆ.ದಕ್ಷಿಣ ಕನ್ನಡದಲ್ಲಿ ಕತಾರ್‌ನಿಂದ ಬಂದು ವಾಪಸಾಗಿದ್ದ ವ್ಯಕ್ತಿಯೊಬ್ಬರಿಗೆ ಕರೋನ ರೂಪಾಂತರಿ ಇಟಾ ವೈರಸ್ ಪತ್ತೆಯಾಗಿದ್ದು, ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ 4 ತಿಂಗಳ ಬಳಿಕ ವಿಚಾರ ಬಯಲಾಗಿದೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಅರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮಾಹಿತಿ ನೀಡಿ ನಾಲ್ಕು ತಿಂಗಳ ಹಿಂದೆ ಕತಾರ್‌ನಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯನ್ನು ಏರ್ಪೋರ್ಟ್ ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಸ್ಯಾಂಪಲ್ಸ್ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಜಿನೋಮಿಕ್ ಸ್ಟಡಿಗೆ ಕಳುಹಿಸಲಾಗಿತ್ತು.ಇದೀಗ ಮಾದರಿ ಸಂಗ್ರಹಿಸಿದ ನಾಲ್ಕು ತಿಂಗಳ ಬಳಿಕ ಆ ವ್ಯಕ್ತಿಯಲ್ಲಿ ಇಟಾ ತಳಿಯ ವೈರಾಣು ಇರುವುದು ದೃಢವಾಗಿದೆ. ಆದರೆ, ಸೋಂಕಿತ ವ್ಯಕ್ತಿ ಕೊರೊನಾ ಪಾಸಿಟಿವ್ ಬಂದ ನಂತರ ಚಿಕಿತ್ಸೆ ಪಡೆದು ಕೆಲ ಕಾಲ ಮನೆಯಲ್ಲಿದ್ದು, ಗುಣಮುಖರಾದ ನಂತರ ಮರಳಿ ಕತಾರ್ಗೆ ತೆರಳಿದ್ದಾರೆ. ಅಲ್ಲದೇ ನಾಲ್ಕು ತಿಂಗಳ
ಹಿಂದೆಯೇ ಅವರ ಸಂಪರ್ಕದಲ್ಲಿದ್ದ 150 ಜನರ ಟೆಸ್ಟ್ ಮಾಡಿದ್ದು, ಎಲ್ಲರಿಗೂ ನೆಗೆಟಿವ್ ಬಂದಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಈ ಹೊಸ ರೂಪಾಂತರಿ ಇಟಾ ವೈರಾಣು ಬ್ರಿಟನ್ ನಲ್ಲಿ ಪತ್ತೆಯಾಗಿತ್ತು.ಬಳಿಕ ಭಾರತದಲ್ಲಿ ಮಿಜೋರಾಂ ಸೇರಿ ಕೆಲವು ಭಾಗದಲ್ಲಿ ಕಂಡುಬಂದಿತ್ತು.ಕೊವಿಡ್ ರೂಪಾಂತರಿ ತಳಿಗಳ ಬಗ್ಗೆ ಅಧ್ಯಯನ ನಡೆಸುವ ಸಂಧರ್ಭದಲ್ಲಿ ಈ ಪ್ರಕರಣ ಪತ್ತೆಯಾಗಿದೆ.
'ಈ ರೂಪಾಂತರಿ ವೈರಸ್ ಹೆಚ್ಚು ತೀಕ್ಷ್ಣತೆ ಹೊಂದಿಲ್ಲದ ಕಾರಣ ಜನರು ಭಯಪಡುವ ಅಗತ್ಯ ಇಲ್ಲ.ಈಗಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ ಸಾಕು.ಹೊಸ ಪ್ರಭೇದಕ್ಕೂ ಈಗಿರುವ ಚಿಕಿತ್ಸೆಯೇ ಮುಂದುವರಿಯಲಿದ್ದು ಪ್ರಸ್ತುತ ಸಿದ್ದವಾಗಿರುವ ಲಸಿಕೆಯಿಂದಲೇ ಈ ವೈರಸ್ ಗುಣವಾಗುವ ಸಾದ್ಯತೆ ಹೆಚ್ಚಿದೆ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.
















