6 ವರ್ಷದ ಬಾಲಕಿ ಮೇಲೆ ಅತ್ಯಾಚಾರ​: ಅಪರಾಧಿಗೆ 110 ವರ್ಷ ಜೈಲು, ₹6 ಲಕ್ಷ ದಂಡ ವಿಧಿಸಿದ ಕೋರ್ಟ್

Coastal Bulletin
6 ವರ್ಷದ ಬಾಲಕಿ ಮೇಲೆ ಅತ್ಯಾಚಾರ​: ಅಪರಾಧಿಗೆ 110 ವರ್ಷ ಜೈಲು, ₹6 ಲಕ್ಷ ದಂಡ ವಿಧಿಸಿದ ಕೋರ್ಟ್

ಆಲಪ್ಪುಳ (ಕೇರಳ) : ಆರು ವರ್ಷದ ಅಪ್ರಾಪ್ತೆಯ ಮೇಲೆ 62 ವರ್ಷದ ದುರುಳ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕೇರಳದ ವಿಶೇಷ ತ್ವರಿತಗತಿ ನ್ಯಾಯಾಲಯ (ಪೋಕ್ಸೋ) ಮಹತ್ವದ ತೀರ್ಪು ನೀಡಿದೆ. ಅಪರಾಧಿಗೆ 110 ಜೈಲು ಶಿಕ್ಷೆ, 6 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಅಪರಾಧಿಯು ಆರರ ಬಾಲಕಿಯ ಮೇಲೆ 2021 ರಿಂದ ಅಂದರೆ ಮೂರು ವರ್ಷಗಳಿಂದ ಗಂಭೀರ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣ ಬೆಳಕಿಗೆ ಬಂದು, ಈ ಕುರಿತು ವಿಚಾರಣೆ ನಡೆಸಿದ ಚೇರ್ತಲಾ ವಿಶೇಷ ತ್ವರಿತಗತಿ ನ್ಯಾಯಾಲಯ (ಪೋಕ್ಸೊ) ಅಪರಾಧಿ ರಮಣನ್ ಎಂಬಾತನಿಗೆ ಗರಿಷ್ಠ ಶಿಕ್ಷೆ ನೀಡಿದೆ.

ಮಗುವಿನ ಮೇಲೆ ದೌರ್ಜನ್ಯ ಎಸಗಿದ್ದಲ್ಲದೇ, ಅಪರಾಧಿ ಬೆದರಿಕೆ ಹಾಕಿದ್ದ. ಇದಕ್ಕೆ ಆತನ ಪತ್ನಿಯೂ ಸಹಕರಿಸಿದ್ದಳು. ಆದರೆ, ಆಕೆ ಅನಾರೋಗ್ಯದಿಂದ ಬಳಲುತ್ತಿದ್ದು ಪ್ರಕರಣದಿಂದ ಪ್ರತ್ಯೇಕಿಸಲಾಗಿದೆ. ಮುಖ್ಯ ಆರೋಪಿಯಾಗಿದ್ದ ರಮಣನ್​​ಗೆ ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್​​ಗಳಡಿ ಒಟ್ಟಾರೆ 110 ವರ್ಷಗಳ ಜೈಲು ಶಿಕ್ಷೆ ಮತ್ತು 6 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್​ ಆದೇಶಿಸಿತು.

ದಂಡ ಪಾವತಿಸಲು ಸಾಧ್ಯವಾಗದಿದ್ದರೆ, ಅಪರಾಧಿಯು ಹೆಚ್ಚುವರಿಯಾಗಿ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಎಲ್ಲ ಶಿಕ್ಷೆಗಳನ್ನು

ಏಕಕಾಲದಲ್ಲಿ ಅನುಭವಿಸಬೇಕು. ಅಪ್ರಾಪ್ತೆ ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸಿದ್ದು, ಸೂಕ್ತ ಪರಿಹಾರ ನೀಡುವಂತೆಯೂ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ 29 ಸಾಕ್ಷಿಗಳು ಮತ್ತು 28 ದಾಖಲೆಗಳನ್ನು ಸಾಕ್ಷ್ಯವಾಗಿ ನೀಡಿತ್ತು.

ಪ್ರಕರಣ ಬಯಲಾಗಿದ್ದು ಹೇಗೆ?: ಸಂತ್ರಸ್ತೆ ಬಾಲಕಿಯ ಅಜ್ಜನ ವಯಸ್ಸಿನವನಾಗಿದ್ದ ಆಳಪ್ಪುಳ ಜಿಲ್ಲೆಯ ಥೆಕ್ಕಡಿಯ ಮರರಿಕುಲಂನ ರಮಣನ್ (62) ಎಂಬಾತ ಮಗುವಿನ ಮೇಲೆ 2021 ರಿಂದ ಲೈಂಗಿಕ ದೌರ್ಜನ್ಯ ಎಸಗುತ್ತಾ ಬಂದಿದ್ದ. ಇದು ಬಾಲಕಿಯ ಅಜ್ಜಿಯ ಗಮನಕ್ಕೆ ಬಂದಿದೆ. ತಕ್ಷಣವೇ ಆಕೆ ಅಪ್ರಾಪ್ತೆಯ ತಾಯಿಗೆ ತಿಳಿಸಿದ್ದರು. ಈ ಕುರಿತು ಬಾಲಕಿಯನ್ನು ವಿಚಾರಿಸಿದಾಗ, ಘಟನೆಯ ಕುರಿತು ಬಾಯ್ಬಿಟ್ಟಿದ್ದಳು. ಆರೋಪಿ ರಮಣನ್​ ವಿರುದ್ಧ ಮಕ್ಕಳ ಸಹಾಯವಾಣಿ ಮತ್ತು ಪೊಲೀಸರಿಗೆ ದೂರು ನೀಡಲಾಗಿತ್ತು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿತ್ತು.

Leave a Comment