ಕಾಸರಗೋಡು: ಕುಂಬಳ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲದಿಂದ ಗೆದ್ದ ಸಿಪಿಎಂ ಸದಸ್ಯ ಎಸ್.ಕೊಗ್ಗು ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಕೊಗ್ಗು ಗ್ರಾಮ ಪಂಚಾಯಿತಿ ಹಿತರಕ್ಷಣಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಳಕ್ಕೂ ಕಾರಣವಾಗಿತ್ತು. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ರಾಜೀನಾಮೆ ಸಲ್ಲಿಸಿದ ಕೊಗ್ಗು ಅವರು ರಾಜೀನಾಮೆ ಪತ್ರವನ್ನು ಬೇರೆಯವರ ಮೂಲಕ ರವಾನಿಸಿದ್ದು, ರಾಜೀನಾಮೆಗೆ ಕಾರಣವನ್ನು ಪತ್ರದಲ್ಲಿ ತಿಳಿಸಿಲ್ಲ ಎಂದು ಪಂಚಾಯತ್ ಕಾರ್ಯದರ್ಶಿ ತಿಳಿಸಿದ್ದಾರೆ. ಇಬ್ಬರು ಬಿಜೆಪಿ ಸದಸ್ಯರ ಬೆಂಬಲದಿಂದ ಕೊಗ್ಗು ಹಿತರಕ್ಷಣಾ ಸ್ಥಾಯಿ ಸಮಿತಿ ಅಧ್ಯಕ್ಷರಾದರು. ಸಿಪಿಎಂ
ಮತ್ತು ಬಿಜೆಪಿ ನಡುವೆ ‘ಅಪವಿತ್ರ ನಂಟು’ ಇದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಭಾನುವಾರ ತಮ್ಮ ಪಕ್ಷದ ಜಿಲ್ಲಾ ಸಮಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಕೊಗ್ಗು ಅವರನ್ನು ಬೆಂಬಲಿಸಲು ಕಾರಣರಾಗಿದ್ದ ಬಿಜೆಪಿ ಹಿರಿಯ ನೇತರರಾದ ಸುರೇಶ್ ಶೆಟ್ಟಿ ಪೂಕಟ್ಟೆ ಹಾಗೂ ಶ್ರೀಕಾಂತ್ ಅವರ ರಾಜೀನಾಮೆಗೂ ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದು ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪವು ತೀವ್ರಗೊಳ್ಳುವ ಎಲ್ಲಾ ಲಕ್ಷಣಗಳು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.














