ಪ್ರಧಾನಿ ನರೇಂದ್ರ ಮೋದಿ ಕೇರಳದ ಗುರುವಾಯೂರಿನ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ನಟ ಹಾಗೂ ಬಿಜೆಪಿ ನಾಯಕ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹದಲ್ಲಿ ಭಾಗಿಯಾದರು.
ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು.ತ್ರಿಶೂರ್‌ನಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ದೇವಸ್ಥಾನದ ಆಡಳಿತ ಮಂಡಳಿ ಸ್ಮರಣಿಕೆ ನೀಡಿ ಸನ್ಮಾನಿಸಿತು.ಬೆಳಗ್ಗೆ 7.30ಕ್ಕೆ ಕೊಚ್ಚಿಯಿಂದ ಹೆಲಿಕಾಪ್ಟರ್ ಮೂಲಕ ಗುರುವಾಯೂರಿನ ಶ್ರೀಕೃಷ್ಣ ಕಾಲೇಜು ಮೈದಾನಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ಸ್ವಾಗತಿಸಲು ನೂರಾರು ಜನರು ಮೈದಾನದಲ್ಲಿ ನೆರೆದಿದ್ದರು. ತ್ರಿಶೂರ್ ಜಿಲ್ಲಾಡಳಿತ ಹಾಗೂ ಬಿಜೆಪಿ ಮುಖಂಡರು ಪ್ರಧಾನಿ ಅವರನ್ನು ಬರಮಾಡಿಕೊಂಡರು.ಗುರುವಾಯೂರು ದೇವಸ್ವಂ ವ್ಯವಸ್ಥಾಪನಾ ಸಮಿತಿಯಿಂದ ಶ್ರೀ ವಲ್ಸಂ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದ ನಂತರ
ಮೋದಿ ಶ್ರೀಕೃಷ್ಣ ದೇವಸ್ಥಾನಕ್ಕೆ ತೆರಳಿದರು. ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ಸೋಪಾನಂನಲ್ಲಿ ತುಪ್ಪ ಮತ್ತು ಕಮಲದ ಹೂವುಗಳನ್ನು ಅರ್ಪಿಸಿದರು. ಮೋದಿ ಅವರು ದೇವಸ್ಥಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಕಳೆದರು.
ಆ ಬಳಿಕ ತಿರುವನಂತಪುರಂ ಮೂಲದ ಉದ್ಯಮಿ ಶ್ರೇಯಸ್ ಅವರೊಂದಿಗೆ ಬಿಜೆಪಿ ನಾಯಕ ಮತ್ತು ನಟ ಸುರೇಶ್ ಗೋಪಿ ಅವರ ಪುತ್ರಿ ಭಾಗ್ಯ ಅವರ ವಿವಾಹದಲ್ಲಿ ಪಾಲ್ಗೊಂಡರು.ಕೇರಳ ಚಿತ್ರರಂಗದ ಸ್ಟಾರ್ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್ ಸೇರಿದಂತೆ ಸಿನಿಮಾ ನಟರು ತಮ್ಮ ಕುಟುಂಬ ಸಮೇತ ಮದುವೆಯಲ್ಲಿ ಪಾಲ್ಗೊಂಡಿದ್ದರು.














