ಕೇರಳ (ಅ. 01): ಸಿಪಿಎಂನ ಹಿರಿಯ ನಾಯಕ ಹಾಗೂ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ (68)ವಿಧಿವಶರಾಗಿದ್ದಾರೆ. ಆಗಸ್ಟ್ 29 ರಂದು ಕ್ಯಾನ್ಸರ್ ಚಿಕಿತ್ಸೆಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬಾಲಕೃಷ್ಣನ್ ಅನಾರೋಗ್ಯ ಕಾರಣಗಳಿಂದಾಗಿ ಇತ್ತೀಚೆಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇರಳದ -ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಕೊಡಿಯೇರಿ ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ 'ಸಿಪಿಎಂ ಪಾಲಿಟ್‌ಬ್ಯೂರೋ' ಸದಸ್ಯರಾಗಿದ್ದರು.
2015 ರಿಂದ 2022 ರವರೆಗೆ, ಕೊಡಿಯೇರಿ ಬಾಲಕೃಷ್ಣನ್ ಸಿಪಿಐ (ಎಂ), ಕೇರಳ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ವಿ ಎಸ್ ಅಚ್ಚುದಾನಂದನ್ ಅವರ ಸಂಪುಟದಲ್ಲಿ ಅವರು ಗೃಹ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. 1987 ರಲ್ಲಿ, ಅವರು ಟೆಲಿಚೇರಿ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ
ಶಾಸಕರಾಗಿ ಆಯ್ಕೆಯಾದರು.
2001-2006 ಯುಡಿಎಫ್ ಸರ್ಕಾರದ ಆಡಳಿತದಲ್ಲಿ ವಿರೋಧ ಪಕ್ಷದ ಉಪ ನಾಯಕರಾಗಿದ್ದರು. ಅವರು 2011 ರಲ್ಲಿ ವಿರೋಧ ಪಕ್ಷದ ಉಪ ನಾಯಕನ ಸ್ಥಾನವನ್ನು ಹೊಂದಿದ್ದರು. ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಮರು ಆಯ್ಕೆಯಾದರು, ಆದರೆ ಇತ್ತೀಚೆಗೆ ಆರೋಗ್ಯ ಸಮಸ್ಯೆಗಳಿಂದಾಗಿ ರಾಜೀನಾಮೆ ನೀಡಬೇಕಾಯಿತು.














