ಕೇರಳದಲ್ಲಿ ದಿನದಿಂದ ದಿನಕ್ಕೆ ಝಿಕಾ ವೈರಸ್ ಸೋಂಕುಪ್ರಕರಣ ಹೆಚ್ಚುತ್ತಿದೆ. ಮತ್ತೆ 5 ಮಂದಿಯಲ್ಲಿ ಝಿಕಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಪತ್ತೆಯಾದ ಝಿಕಾ ಸೋಂಕಿತರಲ್ಲಿ ಓರ್ವ ಪುರುಷ, ನಾಲ್ವರು ಮಹಿಳೆಯರಾಗಿದ್ದಾರೆ. ಅವರಲ್ಲಿ ಇಬ್ಬರು ತಿರುವನಂತಪುರಂನ ಅನಾಯಾರ ಮೂಲದವವರು ಎನ್ನಲಾಗಿದೆ.
ತಿರುವನಂತಪುರದಲ್ಲಿ ಝಿಕಾ ಹರಡುವಿಕೆ ಹೆಚ್ಚಾದ ಹಿನ್ನೆಲೆ ಜಿಲ್ಲಾ ವೈದ್ಯಕೀಯ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.
ಕೇರಳದಲ್ಲಿ ಝೀಕಾ ವೈರಸ್ ಹಾವಳಿ ಏರುತ್ತಿದ್ದಂತೆ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಕಾರ್ಯಕರ್ತೆಯರು ಮತ್ತು
ಆರೋಗ್ಯ ಸಹಾಯಕರಿಗೆ ಆದೇಶಿಸಲಾಗಿದೆ.
ಜ್ವರ, ಸಣ್ಣ ಸಣ್ಣ ಗುಳ್ಳೆಗಳು, ಕಣ್ಣಲ್ಲಿ ನೀರು ಸೋರುವುದು ಮತ್ತು ಸಂಧಿವಾತ ಝೀಕಾ ವೈರಸ್ ನ ಪ್ರಮುಖ ಲಕ್ಷಣಗಳಾಗಿದ್ದು ಸೊಳ್ಳೆಗಳ ಮೂಲಕ ವಾಹಕಗಳಾಗಿ ಹರಡುತ್ತದೆ. ಈ ಈಡಿಸ್ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಕಚ್ಚುತ್ತವೆ ಹಾಗೂ ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ.ಸದ್ಯ ಮಳೆಗಾಲ ಈ ವೈರಸ್ ಹರಡಲು ಈ ಸೊಳ್ಳೆಗೆ ಅನುಕೂಲವಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ










