ಮಂಗಳೂರು:ಮಂಗಳೂರಿನಿಂದ ಗುಜರಾತಿಗೆ ಒಯ್ಯುತ್ತಿದ್ದ ಎರಡು ಕೋಟಿ ಮೌಲ್ಯದ ಅಡಿಕೆಯೊಂದಿಗೆ ಚಾಲಕರು ಪರಾರಿಯಾದ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಲಾರಿ ಚಾಲಕರಾದ ಭವೇಶ್ ಕೆ. ಷಾ, ಆಶಿಷ್ ಯಾದವ್ ಮತ್ತು ಮಹಾರಾಷ್ಟ್ರದ ನಾಸಿಕ್ ನಲ್ಲಿ ಜೋಷಿ ಟ್ರಾನ್ಸ್ ಪೋರ್ಟ್ ಮಾಲೀಕ ವಿಜಯ್ ಜೋಷಿ ವಿರುದ್ದ ಕೇಸು ದಾಖಲಾಗಿದೆ.
ಪ್ರಕರಣದ ವಿವರ
ಒಂದರಲ್ಲಿ 291 ಚೀಲ ಮತ್ತು ಇನ್ನೊಂದರಲ್ಲಿ 301 ಚೀಲ ಅಡಿಕೆ ಹೊಂದಿದ್ದ ಲಾರಿ ಜುಲೈ 24ರಂದು ಗುಜರಾತ್ ತಲುಪಬೇಕಾಗಿತ್ತು.ಆದರೆ,ಲಾರಿ ಅಲ್ಲಿಗೆ ತಲುಪದೇ ಅದರ ಚಾಲಕರು ಅಡಿಕೆಯೊಂದಿಗೆ ನಾಪತ್ತೆಯಾಗಿದ್ದಾರೆ.
ಮಂಗಳೂರು, ಭಟ್ಕಳ ಸೇರಿದಂತೆ ವಿವಿಧ ಕಡೆ ಕಚೇರಿಯನ್ನು ಹೊಂದಿರುವ ಸೌತ್ ಇಂಡಿಯಾ ಟ್ರಾನ್ಸ್ ಪೋರ್ಟ್
ಕಂಪನಿಯು ಅಡಿಕೆ ಸೇರಿದಂತೆ ವಿವಿಧ ಕಾಡುತ್ಪನ್ನಗಳನ್ನು ಖರೀದಿಸಿ,ಹೊರ ರಾಜ್ಯಗಳಿಗೆ ರವಾನಿಸುತ್ತದೆ.ಅದೇ ರೀತಿ ಅಡಿಕೆಯನ್ನು ಖರೀದಿಸಿ, ಗುಜರಾತಿನ ರಾಜಕೋಟ್ ನಲ್ಲಿರುವ ಸೌತ್ ಇಂಡಿಯಾ ಟ್ರಾನ್ಸ್ ಪೋರ್ಟ್ ಕಚೇರಿಗೆ ಕಳುಹಿಸಿಕೊಟ್ಟಿತ್ತು. ಇದಕ್ಕಾಗಿ ಬೋಳೂರಿನ ಜಯಲಕ್ಷ್ಮೀ ಟ್ರಾನ್ಸ್ ಪೋರ್ಟ್ ಬುಕ್ಕಿಂಗ್ ಕಚೇರಿಯಿಂದ ಲಾರಿ ಬಾಡಿಗೆ ಪಡೆಯಲಾಗಿತ್ತು. ಆದರೆ, ಲಾರಿ ನಿಗದಿತ ದಿನಾಂಕಕ್ಕೆ ಅಲ್ಲಿಗೆ ತಲುಪದೇ ಅಡಿಕೆಯನ್ನು ಬೇರೆಡೆಗೆ ಒಯ್ದು ಕಳವು ಮಾಡಿರುವ ಸಂಶಯ ಬಂದಿದೆ. ಲಾರಿ ಚಾಲಕರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಇಬ್ಬರೂ ನಾಪತ್ತೆಯಾಗಿದ್ದಾರೆ.















