Coastal Bulletin

ವಿಟ್ಲ: ದಕ್ಷಿಣ ಗಾಣಗಾಪುರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಶ್ರೀ ಒಡಿಯೂರು ರಥೋತ್ಸವದ ಅಂಗವಾಗಿ 23ನೇ ತುಳು ಸಾಹಿತ್ಯ ಸಮ್ಮೇಳನ ನಡೆಯಿತು.

ಸಮ್ಮೇಳನವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರೀತಿ ವಿಶ್ವಾಸ ತುಳುವರ ಜೀವಾಳವಾಗಿದೆ. ತುಳುವಿಗೆ ಉನ್ನತ ಸ್ಥಾನಮಾನವಿದ್ದು, ತುಳುವರಿಂದ ತುಳು ಸಂಸ್ಕೃತಿಗೆ ಹಲವು ಕೊಡುಗೆ ಲಭಿಸಿದೆ. ಜನರಿಗೆ ತುಳು ಸಂಸ್ಕೃತಿಯನ್ನು ನೆನಪಿಸುವ ಜತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳ ಅವಶ್ಯಕತೆಯಿದೆ. ರಾಸಾಯನಿಕಗಳನ್ನು ಮಣ್ಣಿಗೆ ಸೇರಿಸಿ ಮಣ್ಣಿನ ಸಾರ ಕಡಿಮೆ ಮಾಡುವ ಜತೆಗೆ ಆಹಾರ ವಿಷವಾಗಿದೆ. ಅಜ್ಜಿ ಕಥೆಯಲ್ಲಿ ಜೀವನ ಸಾರವನ್ನು ನೀಡುವ ನೈತಿಕ ಮೌಲ್ಯಗಳು ತುಂಬಿದೆ. ಭಾಷೆ – ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳಾಗಿದೆ. ಹಿಂದಿನ ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಶಕ್ತಿ ಪ್ರಯತ್ನಿಸಬೇಕು. ಮನೆಯಲ್ಲಿ ಬದಲಾವಣೆಯಾದಾಗ ದೇಶ ಬದಲಾಗಲು ಸಾಧ್ಯ ಎಂದು ತಿಳಿಸಿದರು.

ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲ ಮಾತನಾಡಿ ನೆಲ – ಜಲ ಸಂರಕ್ಷಣೆಯ ವಿಚಾರದಲ್ಲಿ ನಮ್ಮ ಹೊಣೆಯಿದ್ದು, ಪರಿಸರವನ್ನು ಉಳಿಸಿ ಮುಂದಿನ ಜನಾಂಗಕ್ಕೆ ನೀಡುವ ಕಾರ್ಯವಾಗಬೇಕಾಗಿದೆ. ಕೃಷಿ ಪ್ರಧಾನವಾದ ತುಳುನಾಡು ಕೈಗಾರಿಕೀಕರಣದತ್ತ ಹೆಚ್ಚು ವಾಲುತ್ತಿದೆ. ಅಭಿವೃದ್ಧಿಯ ಜತೆಗೆ ಕೃಷಿ – ಋಷಿ ಸಂಸ್ಕೃತಿಯೊಂದಿಗೆ ತುಳುವರು ಬೆಳೆಯಬೇಕು ಎಂದು ತಿಳಿಸಿದರು.

ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಉಪಸ್ಥಿತರಿದ್ದರು.ಅಖಿಲ ಭಾರತ ತುಳು ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ, ಬೆಂಗಳೂರು ತುಳುವರ ಚಾವಡಿ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ದ. ಕ. ಜಿಲ್ಲಾ ಕ್ಯಾಟರಿಂಗ್ ಎಸೋಸಿಯೇಶನ್ ಅಧ್ಯಕ್ಷ ರಾಜ್ ಗೋಪಾಲ ರೈ, ಪೂರ್ಣಿಮಾ ಭಾಗವಹಿಸಿದ್ದರು.

ಅಖಿಲ ಭಾರತ ತುಳು ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ, ಬೆಂಗಳೂರು ತುಳುವರ ಚಾವಡಿ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ದ. ಕ. ಜಿಲ್ಲಾ ಕ್ಯಾಟರಿಂಗ್ ಎಸೋಸಿಯೇಶನ್ ಅಧ್ಯಕ್ಷ ರಾಜ್ ಗೋಪಾಲ ರೈ, ಪೂರ್ಣಿಮಾ ಉಪಸ್ಥಿತರಿದ್ದರು.

ರೇಣುಕಾ ಎಸ್. ರೈ ಒಡಿಯೂರು ಪ್ರಾರ್ಥಿಸಿದರು. ಒಡಿಯೂರು ತುಳು ಕೂಡದ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿದರು. ಜಯಪ್ರಕಶ್ ಶೆಟ್ಟಿ ಎ. ಅಧ್ಯಕ್ಷರ ಪರಿಚಯ ಮಾಡಿದರು. ದೇವಿಪ್ರಸಾದ್ ಶೆಟ್ಟಿ ಬೆಜ್ಜ ವಂದಿಸಿದರು. ಲೋಕೇಶ್ ಶೆಟ್ಟಿ ಬಾಕ್ರಬೈಲು

ಕಾರ್ಯಕ್ರಮ ನಿರೂಪಿಸಿದರು.


ತುಳು ತುಲಿಪು ವಿಚಾರಗೋಷ್ಠಿ:

ನೆಲ, ಜಲ, ತೆಲಿಕೆ-ನಲಿಕೆ ವಿಚಾರದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲ ಉಪಸ್ಥಿತಿಯಲ್ಲಿ ತುಳು ತುಳಿಪು ನಡೆಯಿತು.

ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಮಾತನಾಡಿ ತುಳುನಾಡನ್ನು ಭೌಗೋಳಿಕವಾಗಿ ಹಾಗೂ ದೈವ ಪಾರ್ದನಗಳ ಆಧಾರದಲ್ಲಿ ವಿಶ್ಲೇಷಿಸಬಹುದು. ನೆಲದ ಬಗ್ಗೆ ತುಳುವರಿಗೆ ಪೂಜನೀಯ ಭಾವನೆಯಿದ್ದು, ಆರಾಧನೆ – ಆಚರಣೆಗಳ ಮೂಲಕ ಕೃಷಿಯನ್ನು ಮಾಡಲಾಗುತ್ತಿತ್ತು. ನೆಲಮೂಲ ಆಚರಣೆಯಲ್ಲಿರುವ ತುಳುನಾಡಿನಲ್ಲಿ ಆಹಾರಕ್ಕೆ ಕೊರತೆ ಬಂದರೆ ವಿಷಕ್ಕಿಂತ ಅಪಾಯಕಾರಿ ಎಂಬ ಕಲ್ಪನೆಯಿತ್ತು. ಇಂದು ನೆಲವನ್ನು ನೋಡುವ ದೃಷ್ಠಿ ಬದಲಾಗಿದ್ದು, ಪೂಜನೀಯ ಭಾವನೆ ಕಡಿಮೆಯಾಗಿ ವಾಣಿಜ್ಯದತ್ತ ವಾಲುತ್ತಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್ ಮಾತನಾಡಿ ಕೈಗಾರಿಕೀಕರಣದ ಮೂಲಕ ನದಿ ಮೂಲಗಳಿಗೆ ಕೈಹಾಕಿರುವುದು ಮನುಕುಲಕ್ಕೆ ಅಪಾಯದ ಸೂಚಕವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀರಿನ ಮೂಲಗಳಾದ ಕೆರೆಗಳು ಮಾಯವಾಗುತ್ತಿವೆ. ನದಿ ತಿರುವಿನಂತಹ ಕಾರ್ಯಗಳು ಭವಿಷ್ಯದಲ್ಲಿ ಪರಿಸರಕ್ಕೆ ಮಾರಕವಾಗಿದೆ. ಆಧುನಿಕತೆಯ ಹೆಸರಿನಲ್ಲಿ ನೀರನ್ನು ಅನಾವಶ್ಯಕವಾಗಿ ಪೋಲು ಮಾಡಲಾಗುತ್ತಿದೆ. ಕುಡಿಯುವ ನೀರಿನ ಮೌಲ್ಯವನ್ನು ಅರಿತು ಬಳಸುವ ಕಾರ್ಯವಾಗಬೇಕು ಎಂದು ಹೇಳಿದರು.

ದೈವ ನರ್ತಕ ಕಿಟ್ಟು ಕಲ್ಲುಗುಡ್ಡೆ ಮಾತನಾಡಿ ನೆಲ – ಜಲ ಸರಿಯಿದ್ದಾಗ ಸಮಾಜದಲ್ಲಿ ಸಂತೋಷ ಉಳಿಯುತ್ತದೆ. ದುಡಿ ನಲಿಕೆಯಿಂದ – ಭರತನಾಟ್ಯದವರೆಗೆ ವಿವಿಧ ನೃತ್ಯ ಪ್ರಾಕಾರಗಳಿದ್ದು, ಜನಪದ ಕಲೆಯ ಒಳಗೆ ಬದುಕಿನ ಸಾರ ಹುದುಗಿದೆ. ವೈಜ್ಞಾನಿಕ ಜೀವನ ಹಾಗೂ ಔಧ್ಯೋಗಿಕರಣಕ್ಕೆ ಮಾರುಹೋಗಿ, ತುಳುನಾಡಿನ ನೃತ್ಯ ಪ್ರಾಕಾರಗಳು ನಶಿಸುತ್ತಿದೆ. ತುಳುನಾಡಿನ ಮಣ್ಣಿನ ಗುಣದಿಂದ ಸಂಸ್ಕೃತಿಗೆ ಅಳಿವಿಲ್ಲ ಎಂದು ತಿಳಿಸಿದರು.

ರಾಜಶ್ರೀ ಟಿ. ರೈ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಕನ್ಯಾನ ವಂದಿಸಿದರು. ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.

ತುಳು ಜಾನಪದ ತೆಲಿಕೆ – ನಲಿಕೆ ಸ್ಪರ್ಧೆ ನಡೆಯಿತು. ರಾಜಶ್ರೀ ಟಿ. ರೈ ಕಾರ್ಯಕ್ರಮ ನಿರೂಪಿಸಿದರು. ಸಾಯಂಕಾಲ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪಾವನ ಪವನಾತ್ಮಜ ಯಕ್ಷಗಾನ ಬಯಲಾಟ ನಡೆಯಿತು.

Leave a Comment