ಬಂಟ್ವಾಳ: ದೇಶದಲ್ಲಿ ಈ ಹಿಂದೆ ಗುಜರಾತ್ ಮಾದರಿ ಎನ್ನುತ್ತಿದ್ದವರು ಈಗ ಕರ್ನಾಟಕ ಮಾದರಿ ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಐಟಿ ಬಿಟಿ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಭೂಮಿ, ವಸತಿ, ಪಡಿತರ, ಮೂಲ ಸೌಕರ್ಯ, ರಸ್ತೆ, ಶಿಕ್ಷಣ, ಮೀಸಲಾತಿ ಕೊಡುಗೆ ನೀಡಿದ್ದ ಕಾಂಗ್ರೆಸ್ ಪ್ರಸಕ್ತ ಪಂಚ ಗ್ಯಾರಂಟಿ ಯೋಜನೆ ನೀಡಿ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಟ್ಟು ರೂ 98,954 ಕೋಟಿ ಮೊತ್ತದ ಹಣ ಅರ್ಹ ಫಲಾನುಭವಿಗಳಿಗೆ ನೇರವಾಗಿ ಕೊಡುಗೆ ನೀಡಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಅಂಬೇಡ್ಕರ್ ಭವನದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಮಂಗಳವಾರ ನಡೆದ ಗೃಹಲಕ್ಷ್ಮಿ ಫಲಾನುಭವಿಗಳ 'ಸ್ವಸಹಾಯ ಸಂಘಗಳ ಉದ್ಘಾಟನೆ' ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಉಚಿತ ಬಸ್ ಸಂಚಾರ ಶಕ್ತಿ ಯೋಜನೆ ಗಿನ್ನೆಸ್ ದಾಖಲೆ ಬರೆದಿದ್ದು, ಇಲ್ಲಿನ ಗ್ಯಾರಂಟಿ ಯೋಜನೆಗಳ ಬಗ್ಗೆ ಆರ್ಥಿಕ ತಜ್ಞ ರು ಕೂಡಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದರು.
ದೇಶದಲ್ಲಿ ಗರಿಷ್ಟ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆ ರಾಜ್ಯಕ್ಕಿದ್ದರೆ, ರಕ್ತ ಕ್ರಾಂತಿ ಇಲ್ಲದೆ ಭೂ ಮಸೂದೆ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೀರ್ತಿ ಈ ಜಿಲ್ಲೆಗೆ ಇದೆ. ಪಂಚ ಗ್ಯಾರಂಟಿ ಯೋಜನೆಯಲ್ಲಿ ಅತೀ ಹೆಚ್ಚು ಫಲಾನುಭವಿಗಳು ಈ ಜಿಲ್ಲೆಯಲ್ಲೆ ಇದ್ದಾರೆ. ನಾವು ಜನರ ಬದುಕಿನೊಂದಿಗೆ ರಾಜಕೀಯ ಮಾಡಿದ್ರೆ, ಬಿಜೆಪಿ ಜನರ ಭಾವನೆಯೊಂದಿಗೆ ರಾಜಕೀಯ ಮಾಡುತ್ತಿದೆ. ಈ ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಬಿಜೆಪಿ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆ ಪ್ರಕಟಿಸಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ರಾಜ್ಯ ಸಮಿತಿ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 'ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮುಂಚೂಣಿಯಲ್ಲಿದ್ದು, ರಾಜ್ಯೊದಲ್ಲೇ ಗರಿಷ್ಟ ಅನುದಾನ ಇಲ್ಲಿಗೆ ಬಂದಿದೆ' ಎಂದರು.
ಇದೇ
ವೇಳೆ ಅನಂತಾಡಿ ಮತ್ತು ಕೇಪು ಗ್ರಾಮದಲ್ಲಿ ಅತೀ ಹೆಚ್ಚು ಗುಂಪು ರಚನೆ ಮಾಡಿದ ಸಂಘಗಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, 'ರಾಜ್ಯದಲ್ಲಿ ಪ್ರಥಮ ಬಾರಿಗೆ ಗೃಹಲಕ್ಷ್ಮಿ ಫಲಾನುಭವಿಗಳ ಸ್ವಸಹಾಯ ಸಂಘ ರಚನೆಯಾಗಿದೆ'. ದೇಶದಲ್ಲಿ ದುರ್ಬಲರಿಗೆ ಸುರಕ್ಷತೆ ನೀಡಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ಭೂ ಮಸೂದೆ, ಅಕ್ರಮ ಸಕ್ರಮ, 94ಸಿ, ಪಡಿತರ ಫಲಾನುಭವಿಗಳ ಪೈಕಿ ಪ್ರಥಮ ಸ್ಥಾನದಲ್ಲಿದೆ ಎಂದರು.
ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್. ಗಟ್ಟಿ ಶುಭ ಹಾರೈಸಿದರು. ಜಿಲ್ಲಾ ಪಂಚಾಯಿತಿ ಸಿಇಒ ವಿನಾಯಕ ಕಾಬರ್ಾರಿ, ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾರಾಯಣ ನಾಯ್ಕ್, ಪುರಸಭಾಧ್ಯಕ್ಷ ವಾಸು ಪೂಜಾರಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಉಸ್ಮಾನ್,. ಕಡಬ ತಾಲ್ಲೂಕು ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ಮತ್ತಿತರರು ಇದ್ದರು.
ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಸ್ವಾಗತಿಸಿದರು. ಬಂಟ್ವಾಳ ತಾಲ್ಲೂಕು ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಪ್ರಾಸ್ತಾವಿಕ ಮಾತನಾಡಿ, 'ತಾಲ್ಲೂಕಿಗೆ ಒಟ್ಟು ರೂ. 528 ಕೋಟಿ ಮೊತ್ತ ಫಲಾನುಭವಿಗಳಿಗೆ ಸಿಕ್ಕಿದೆ' ಎಂದರು. ಪಿಡಿಒ ಸುನಿಲ್ ಕಡೇಶ್ವಾಲ್ಯ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.














