ಬೆಂಗಳೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ಬೆಂಗಳೂರು ಕಂಬಳ ಸಮಿತಿಯು ಎರಡು ದಿನ ಕಂಬಳ ಮಹೋತ್ಸವ ಆಯೋಜಿಸಿತ್ತು. ವಿವಿಧ ದೇಶಗಳಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ ವಿದೇಶಿಗರು ಕರಾವಳಿ ಭಾಗದ ಸಂಸ್ಕೃತಿಗೆ ಬೆರಗಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊಗಳು ಬೆಂಗಳೂರು ಕಂಬಳದ ಫೋಟೊ, ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಗಳಿಸಿದವು. ಕೋಣ ಹಾಗೂ ಮಾಲೀಕರು ಅಥವಾ ಸಾಕುವವರ ನಡುವಿನ ಬಾಂಧವ್ಯ ತೋರಿಸುವ ವಿಡಿಯೊಗಳು ಜನ ಮೆಚ್ಚುಗೆ ಪಡೆದಿರುವುದು ಮಾತ್ರವಲ್ಲ ಸಾಕಷ್ಟು ವೈರಲ್ ಆಗಿದ್ದವು.ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈಯವರ ಈ ಪ್ರಯತ್ನಕ್ಕೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯಾದ್ಯಂತ ಭಾರೀ ಜನ ಮನ್ನಣೆ ಲಭಿಸಿದೆ.
ಕಳೆದ ವಾರ ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕರಾವಳಿಗೆ ಭೇಟಿ ನೀಡಿದಾಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಳಿನ್ ಕುಮಾರ್ ಕಟೀಲ್ ನಾಲ್ಕನೇ ಬಾರಿಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಈ ಮೂಲಕ ಸ್ವಪಕ್ಷೀಯರ ವಿರೋಧದ ನಡುವೆಯೂ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಷಯ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವುಂಟುಮಾಡಿದೆ.
ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್ ಅವರೇ ಅಭ್ಯರ್ಥಿ ಎನ್ನುವ ಹೇಳಿಕೆ ನೀಡಿದ ಪರಿಣಾಮ, ಈ ಬಾರಿ ಅಭ್ಯರ್ಥಿ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಪುತ್ತಿಲ ಪರಿವಾರಕ್ಕೆ ಇನ್ನಿಲ್ಲದ ಸಿಟ್ಟು ತರಿಸಿದೆ. ಹೀಗಾಗಿ ವಿಜಯೇಂದ್ರ ಹೇಳಿಕೆಯಿಂದ ಕೆರಳಿರುವ ಪುತ್ತಿಲ ಪರಿವಾರ ಕಾರ್ಯಕರ್ತರು, ಮತ್ತೆ ಅರುಣ್ ಕುಮಾರ್ ಪುತ್ತಿಲ ಹೆಸರನ್ನು ಪ್ರಸ್ತಾಪ ಮಾಡಿದ್ದು, ಕರಾವಳಿಗೆ ಪುತ್ತಿಲ ಎನ್ನುವ ಅಭಿಯಾನ ಆರಂಭಿಸಿ ಬಿಜೆಪಿಗೆ ಸೆಡ್ಡು ಹೊಡೆಯಲು ಶುರು ಮಾಡಿದ್ದಾರೆ.
ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅರುಣ್ ಪುತ್ತಿಲ ಅವರನ್ನು ಪಕ್ಷೇತರವಾಗಿ ಸ್ಪರ್ಧಿಸಲು ಈಗಿಂದಲೇ ಪ್ಲಾನ್ ನಡೆಯುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಪುತ್ತೂರು, ವಿಟ್ಲ , ಉಪ್ಪಿನಂಗಡಿ ಸೇರಿದಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಾದ್ಯಂತ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಪುತ್ತಿಲ ಪರಿವಾರ ಮುಂದಾಗಿದೆ.
ಮತ್ತೊಂದೆಡೆ ಧರ್ಮಸ್ಥಳದಲ್ಲಿ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ ಪ್ರಕರಣವೂ ಬಿಜೆಪಿಗೆ ಲೋಕಸಭಾ ಸಭಾ ಚುನಾವಣೆಗೆ ಭಾರೀ ಹಿನ್ನಡೆ ತಂದಿದೆ. ಕೊಲೆಯಾಗಿ 11 ವರ್ಷಗಳಾಗಿದ್ದು ಸೌಜನ್ಯಾ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲು ಆಗಲಿಲ್ಲ ಯಾಕೆ? ಮುರುಗನ್ ಎಂಬ
ಒಳ್ಳೆಯ ಸಿಬಿಐ ಅಧಿಕಾರಿ ತನಿಖೆ ಮಾಡುತ್ತಿದ್ದಾಗ ಅವರನ್ನು ಬದಲಾವಣೆ ಮಾಡಿದರು. ಮೋದಿ ಸರ್ಕಾರ ಇದ್ದಾಗಲೇ ಅಧಿಕಾರಿಯನ್ನು ಬದಲಿಸಿ ತನಿಖೆಯ ದಿಕ್ಕು ತಪ್ಪಿಸಿದ್ದು ಯಾರು? ಹಾಗಾದರೆ ಸೌಜನ್ಯಾ ತನಿಖೆಯನ್ನು ದಿಕ್ಕು ತಪ್ಪಿಸಿದ್ದು ಯಾರು? ಇದಕ್ಕೆ ಕಾರಣಕರ್ತರು ಯಾರು? ಎಂದು ಕಾಂಗ್ರೆಸ್ ಮುಖಂಡ ವಸಂತ ಬಂಗೇರ ಬಿಜೆಪಿಗೆ ಛಾಟಿ ಬೀಸಿದ್ದನ್ನು ಮೆರೆಯುವಂತಿಲ್ಲ.
ಸೌಜನ್ಯ ಕೊಲೆ ಅತ್ಯಾಚಾರದ ಹೋರಾಟಗಾರರು ನ್ಯಾಯಾಲಯದಲ್ಲಿ ಮರು ತನಿಖೆಗೆ ಅರ್ಜಿ ಸಲ್ಲಿಸಬೇಕು ಎನ್ನುವ ಗೃಹಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಹೋರಾಟದ ಮುಂದಾಳು ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ಪ್ರಕರಣ ಇಡೀ ದೇಶದಲ್ಲಿ ಸುದ್ದಿಯಾಗುತ್ತಿದೆ. ಮಾಜಿ ನ್ಯಾಯಾಧೀಶರು, ವೈದ್ಯರು, ದೊಡ್ಡ ದೊಡ್ಡ ಸಂಘಟನೆಗಳು ನಮ್ಮ ಜೊತೆ ಸೇರಿಕೊಂಡಿದೆ. ಅವರೆಲ್ಲಾ ಸೇರಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ.ಇಡೀ ಹಿಂದೂ ಸಮಾಜಕ್ಕಾಗಿ ನಾವು ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸರ್ಕಾರ ತಮ್ಮ ಸ್ವ ಇಚ್ಛೆಯಿಂದ ಮರು ತನಿಖೆಗೆ ಬೇಕಾದ ವ್ಯವಸ್ಥೆ ಮಾಡಬೇಕು.ನಮ್ಮನ್ನಾಳುವವರು ಮಾಡಿದ ತಪ್ಪಿನ ಪರಿಣಾಮ ಇದು. ರಾಜಕೀಯದವರು ಮಾಡಿದ ತಪ್ಪನ್ನು ಜನ ಅನುಭವಿಸುವಂತಾಗಿದೆ. ಸೌಜನ್ಯ ಪ್ರಕರಣ ಮುಚ್ಚಿ ಹೋಗಲು ರಾಜಕೀಯದವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.ಸೌಜನ್ಯ ಪ್ರಕರಣ ಈ ರೀತಿಯಾಗಲು ಬಿಜೆಪಿ ಮಾಡಿದ ತಪ್ಪೇ ಕಾರಣ. ನ್ಯಾಯಪೀಠದಲ್ಲಿ ಆದ ಅತ್ಯಾಚಾರ, ಕೊಲೆ ಇದು. ಇಲ್ಲಿ ನ್ಯಾಯ ಸಿಗದಿದ್ದರೆ ಇಡೀ ಸನಾತನ ಧರ್ಮ ಅವಸಾನವಾಗಲಿದೆ. ಸೌಜನ್ಯ ಇಲ್ಲಿ ಒಂದು ಕಾರಣ ಮಾತ್ರ. ಅತ್ಯಾಚಾರಿಗಳ ಪರ ನಿಂತವರಿಗೂ ಶಿಕ್ಷೆಯಾಗಬೇಕು ಎಂದು ಹಲವು ವೇದಿಕೆಯಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿ ಎಲ್ಲಾ ರಾಜಕೀಯ ನಾಯಕರಿಗೆ ಸವಾಲಿನ ಸೂಚನೆ ನೀಡಿದ್ದಾರೆ.














