ಬಂಟ್ವಾಳ: ಸುಮಾರು ಅರ್ಧ ಎಕರೆ ವಿಸ್ತೀರ್ಣದ ಗದ್ದೆ.. ಗದ್ದೆಯ ತುಂಬೆಲ್ಲಾ ಹಚ್ಚಿ ಹಸಿರಿನಿಂದ ನಳನಳಿಸುತ್ತಿರುವ ಭತ್ತದ ಪೈರು.. ಕಣ್ಣಾಯಿಸಿ ನೋಡುತ್ತಿದ್ದರೆ ಮನಸ್ಸಿಗೇನೋ ಸಂಭ್ರಮ... ಪ್ರಗತಿಪರ ಕೃಷಿಕರನ್ನು ಮೀರಿಸುವಂತೆ ಈ ಪರಿ ಸಾಗುವಳಿ ಮಾಡಿದವರು ಹಾಸ್ಟೆಲ್ ವಿದ್ಯಾರ್ಥಿನಿಯರು.!
ಒಂದೂವರೆ ತಿಂಗಳ ಹಿಂದೆ ವಾಮದಪದವು ಹಾಗೂ ಚೆನ್ನೈತ್ತೋಡಿಯಲ್ಲಿರುವ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಕೃಷಿ ಕಲಿ ನಲಿ ಕಾರ್ಯಕ್ರಮದ ಮೂಲಕ ಬೆಳೆಸಿದ ಭತ್ತದ ಕೃಷಿ ತೆನೆ ಬಿಡಲಾರಂಭಿಸಿದೆ. ದಿನವಿಡೀ ಗದ್ದೆಯಲ್ಲಿ ಮೈಗೆಲ್ಲಾ ಕೆಸರು ಅಂಟಿಸಿಕೊಂಡು ಅಂದು ನೇಜಿ ಕಿತ್ತು, ನಾಟಿ ಮಾಡಿದ ಪರಿಣಾಮ ಭೂಮಿ ತಾಯಿ ವಿದ್ಯಾರ್ಥಿಗಳಿಗೆ ಉತ್ತಮ ಫಸಲು ನೀಡುವ ನಿರೀಕ್ಷೆ ಹುಟ್ಟಿಸಿದ್ದಾಳೆ, ವಿದ್ಯಾರ್ಥಿಳ ಬೆವರಿನ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಕಾಲ ಸನ್ನಿಹಿತವಾಗಿದೆ.
ಕೃಷಿ ಕಲಿ ನಲಿ:
ಕಳೆದ ಸೆ. ೫ರಂದು ವಾಮದಪದವು ಬಳಿಯ ವಾಂಬೆಟ್ಟುವಿನಲ್ಲಿ ಸ್ಥಳೀಯರಾದ ಯಜ್ಞನಾರಾಯಣ ಎಂಬವರ ಅರ್ಧ ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ವಾಮದಪದವು ಹಾಗೂ ಚೆನ್ನೈತ್ತೋಡಿಯಲ್ಲಿರುವ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಗೂ ಮೆಟ್ರಿಕ್ ಪೂರ್ವ ಬಾಲಕರ ನಿಲಯದ ವಿದ್ಯಾಥಿಗಳಿಗೆ ಕೃಷಿ ಕಲಿ ನಲಿ
ಎನ್ನುವ ಕೃಷಿ ಆಟದ ಜೊತೆಗೆ ಕೃಷಿಯ ಕಲಿಕೆಯ ಬಗ್ಗೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಅವರು ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ನೇಜಿ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್ ಮಾರ್ಗದರ್ಶನ ಮಾಡಿದ್ದರು. ನಿಲಯ ಮೇಲ್ವಿಚಾರಕಿ ಭವಾನಿ ಮುಂದಾಳತ್ವ ವಹಿಸಿದ್ದರು. ಊರಿನ ಗಣ್ಯರು, ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಅಂದು ಹಾಸ್ಟೆಲ್ ವಿದ್ಯಾರ್ಥಿಗಳು ಕೆಸರಿನಲ್ಲಿ ವಿವಿಧ ಆಟೋಟಗಳನ್ನು ಆಡಿ ಸಂಭ್ರಮಿಸಿದ್ದರು. ಬಳಿಕ ಕೃಷಿಕ ಮಹಿಳೆಯರ ಮಾರ್ಗದರ್ಶನ ಪಡೆದು ನೇಜಿ ಕಿತ್ತು ಒಂದು ಮುಡಿ ವಿಸ್ತೀರ್ಣದ ಎರಡು ಗದ್ದೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿ ಕೃಷಿ ಪಾಠವನ್ನು ಕರಗತ ಮಾಡಿಕೊಂಡರು. ಬಾಗಲಕೋಟೆ, ರಾಯಚೂರು ಮೊದಲಾದ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಈ ಹಾಸ್ಟೆಲ್‌ಗಳಲಿದ್ದು ಸುಮಾರು ೩೦೦ ಮಂದಿ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಪಾಲ್ಗೊಂಡರು.