ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು 2025-26ನೇ ಸಾಲಿನಲ್ಲಿ ಒಟ್ಟು ರೂ.1400 ಕೋಟಿ ವ್ಯವಹಾರ ನಡೆಸಿದ್ದು ರೂ.3.40 ಕೋಟಿ ಲಾಭ ಗಳಿಸಿ, ಅತ್ಯುತ್ತಮ ಸಾಧನೆ ಮಾಡಿದೆ ಎಂದು ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೋ ತಿಳಿಸಿದ್ದಾರೆ.
28 ವರ್ಷಗಳ ಇತಿಹಾಸವಿರುವ ಸಂಘವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನಲ್ಲಿ ಒಟ್ಟು 10 ಶಾಖೆಗಳನ್ನು ಒಳಗೊಂಡು ಕಾರ್ಯಾಚರಿಸುತ್ತಿದೆ. 2026ರ ಮಾರ್ಚ್ ಅಂತ್ಯಕ್ಕೆ ಒಟ್ಟು 17,177 ಸದಸ್ಯರಿಂದ ರೂ.3.94 ಕೋಟಿ ಪಾಲು ಬಂಡವಾಳ, ರೂ.150 ಕೋಟಿ ಠೇವಣಿ ಸಂಗ್ರಹದೊಂದಿಗೆ ಹೊರಬಾಕಿ ಸಾಲ ರೂ.137 ಕೋಟಿ ಇರುವುದು.ಸಂಘದ ಒಟ್ಟು ವ್ಯವಹಾರ 1400 ಕೋಟಿ ಆಗಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ. 40ರಷ್ಟು ಪ್ರಗತಿ ಸಾಧಿಸಿದೆ. ಸಂಘವು ರೂ.164 ಕೋಟಿ ದುಡಿಯುವ ಬಂಡವಾಳದೊಂದಿಗೆ, ಕ್ಷೇಮ ನಿಧಿ ಹಾಗೂ ಇತರ ನಿಧಿಗಳನ್ನು ಸೇರಿ ರೂ.11.46 ಕೋಟಿ ನಿಧಿಗಳನ್ನು, ರೂ. 32.71 ಕೋಟಿ ಧನವಿನಿಯೋಗಗಳನ್ನು ಹೊಂದಿದೆ. ಸದಸ್ಯರಿಗೆ ಉತ್ತಮ ಡಿವಿಡೆಂಡ್ ಪಾವತಿಯೊಂದಿಗೆ, ವ್ಯವಹಾರದಲ್ಲಿ ಆಧುನಿಕತೆಯನ್ನು ತರುವ ನಿಟ್ಟಿನಲ್ಲಿ ಸಂಘದ ಎಲ್ಲಾ ಶಾಖೆಗಳಲ್ಲಿ ಕೋರ್ ಬ್ಯಾಂಕಿಂಗ್ ತಂತ್ರಾಂಶವನ್ನು ಅಳವಡಿಸಿ, RTGS/NEFT, SMS Alert, E-Stamp ಸೌಲಭ್ಯದೊಂದಿಗೆ, ಆಕರ್ಷಕ ಬಡ್ಡಿ ದರಗಳನ್ನು ಗ್ರಾಹಕ ಸದಸ್ಯರಿಗೆ ನೀಡುತ್ತ ಬಂದಿರುತ್ತದೆ. ಸಂಘದಲ್ಲಿ ಗ್ರಾಹಕರನ್ನು ವೃದ್ಧಿಸುವ ಸಲುವಾಗಿ ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಪ್ರಗತಿಯಲ್ಲಿದೆ.
ಸಂಸ್ಥೆಯ
ಪ್ರಧಾನ ಕಛೇರಿ, ಬಿ.ಸಿ.ರೋಡು ಶಾಖೆ ಹಾಗೂ ಫರಂಗಿಪೇಟೆ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಸಂಘದ ಕನಸೆಂದು ಬಿಂಬಿತವಾದ, ಸುಸಜ್ಜಿತ ಕೇಂದ್ರ ಕಛೇರಿಯ ಕಟ್ಟಡದ ಯೋಜನೆಯು ಜಾರಿಯಲ್ಲಿದೆ. ಸಂಘವು ಸಮಾಜಮುಖಿ ಕಾರ್ಯಗಳಿಗೆ, ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಕಣಕ್ಕಾಗಿ ನೆರವು ನೀಡಿದೆ. ಸಮಾಜದಲ್ಲಿ ಉತ್ತಮ ಸಾದನೆ ಮಾಡಿದ ಸಾಧಕರಿಗೆ ಗುರುತಿಸಿ ಗೌರವಿಸಿದೆ.
ಸಂಘವು ಸಹಕಾರ ಇಲಾಖೆಯ ಆದೇಶದಂತೆ, ಆಡಳಿತ ಮಂಡಳಿಯ ಉತ್ತಮ ನಿರ್ಣಯಗಳಿಂದ ಹಾಗೂ ಸಿಬ್ಬಂದಿಗಳ ಉತ್ತಮ ಕಾರ್ಯವೈಖರಿಂದ ಪ್ರಗತಿಯ ಹಾದಿಯಲ್ಲಿ ಮುನ್ನುಗ್ಗುತ್ತಿದ್ದು, ಇದರ ಪ್ರತಿಫಲವೆಂಬಂತೆ ಸಹಕಾರ ಇಲಾಖೆ ಹಾಗೂ ಎಂ.ಸಿ.ಎಸ್ ಬ್ಯಾಂಕ್ ಮೂಡುಬಿದಿರೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇವರಿಂದ ಒಟ್ಟು 10 ಬಾರಿ ಸಾಧನಾ ಪ್ರಶಸ್ತಿ ಪಡೆದಿದೆ.
ಸಂಘದ ಈ ಎಲ್ಲಾ ಸಾಧನೆಗೆ ಸಹಕರಿಸಿದ ಸದಸ್ಯರಿಗೆ, ಸಿಬ್ಬಂದಿ ವರ್ಗಕ್ಕೆ ಅಧ್ಯಕ್ಷರಾದ ಜೀವನ್ ಲಾಯ್ಡ್ ಪಿಂಟೊ ಹಾಗೂ ಉಪಾಧ್ಯಕ್ಷರಾದ ವಲೇರಿಯನ್ ಬರೆಟ್ರೊ ಆಡಳಿತ ಮಂಡಳಿಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.













