ಬಂಟ್ವಾಳ:ಬೆಂಗಳೂರು ಕಂಬಳ ಉತ್ಸವ ನೋಡಿಕೊಂಡು ತಮ್ಮ ಊರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಕಾರು ಹಾಗೂ ಬೋರ್ ವೆಲ್ ಲಾరి ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ತೀವ್ರ ಗಾಯಗೊಂಡಿರುವ ಘಟನೆ ಆದಿತ್ಯವಾರ ಮುಂಜಾನೆ ಚಿಗಣಿಪಾಳ್ಯ ಗ್ರಾಮದ ಬಳಿ ನಡೆದಿದೆ.
ಬಜಪೆಯ ಮೂಡು ಪರಾರ ನಿವಾಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಕಿಶನ್ ಶೆಟ್ಟಿ (20) ಮತ್ತು ಬಂಟ್ವಾಳ ಬೆಂಜನಪದವಿನ ಫಿಲಿಪ್ ನೇರಿ ಲೋಬೊ (32)ಸಾವನ್ನಪ್ಪಿದ್ದಾರೆ . ಘಟನೆಯಲ್ಲಿ ಪಿಲಿಫ್ ಅವರ ಪತ್ನಿ ಪ್ರೀತಿ ಲೋಬೊ ಬೆಂಜನಪದವು, ನಿತೀಶ್ ಭಂಡಾರಿ, ಹರೀಶ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಮೂವರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರು ಕಡೆ ಹೋಗುತ್ತಿದ್ದ ಬೋರ್ ವೆಲ್ ಲಾರಿ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ತೆರಳಿದ ಸಿಪಿಐ ನವೀನ್ ಗೌಡ ಅವರ ಪೊಲೀಸ್ ತಂಡ ಕ್ರೈನ್ ಮೂಲಕ ಕಾರಿನಿಂದ ಮೃತ ಮತ್ತು ಗಾಯಗೊಂಡವರನ್ನು ಹರಸಾಹಸಪಟ್ಟು ಹೊರ ತೆಗೆದರು. ಗಾಯಾಳುಗಳನ್ನುಕುಣಿಗಲ್ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ
ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಪಿಲಿಫ್ ನೇರಿ ಲೋಬೋ ಮತ್ತು ಪ್ರೀತಿ ಲೋಬೋ ಅವರು ಕಳೆದ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದರು. ಕಂಬಳ ನೋಡಿ ಸಂತೋಷದಿಂದ ಊರಿಗೆ ತೆರುಳುತ್ತಿದ್ದ ವೇಳೆ ನಡೆದ ಈ ಅಪಘಾತದಲ್ಲಿ ಪತ್ನಿ ಎದುರೇ ಪತಿ ಸಾವನ್ನಪ್ಪಿದ್ದು ಪ್ರೀತಿ ಲೋಬೋ ಅವರ ರೋಧನೆ ಮುಗಿಲು ಮುಟ್ಟಿತ್ತು.
ಮೂಡು ಪರಾರ ನವೀನ್ ಶೆಟ್ಟಿ ಹಾಗೂ ಶೋಭಾ ದಂಪತಿಯ ಏಕೈಕ ಪುತ್ರರಾಗಿರುವ ಕಿಶನ್ ಕೆಂಜಾರಿನ ಶ್ರೀದೇವಿ ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸಸ್ ವಿದ್ಯಾರ್ಥಿರವಾಗಿದ್ದಾರೆ. ಕಂಬಳದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಕಿಶನ್ ಶೆಟ್ಟಿ ಬೆಂಗಳೂರಿನಲ್ಲಿ ಮೊದಲ ಬಾರಿ ನಡೆಯುವ ಕಾರಣ ಅಲ್ಲಿಗೆ ಹೋಗಿದ್ದರು. ಸೋಮವಾರ (ನ 27) ಪರೀಕ್ಷೆ ಇದ್ದ ಕಾರಣ ಶನಿವಾರವೇ ಊರಿಗೆ ಹೊರಟಿದ್ದರು ಎನ್ನಲಾಗಿದೆ.














