ಬಂಟ್ವಾಳ: ತಾಲೂಕಿನ ಸಜೀಪಮೂಡ ಶ್ರೀ ಬಾಲಗಣಪತಿ ದೇವಸ್ಥಾನ ಅನ್ನಪ್ಪಾಡಿ ಇಲ್ಲಿ ಒಂದು ಲಕ್ಷ ಭಕ್ತರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸುವ ಶ್ರೀ ಬಾಲಗಣಪತಿ ಮೂಲಮಂತ್ರ ಲಕ್ಷ ಜಪ ಯಜ್ಞ – ದೂರ್ವ ಹೋಮ ಹಾಗೂ ಚತುರ್ಥ ಪ್ರತಿಷ್ಠಾ ವರ್ಧಂತಿ ವಾರ್ಷಿಕ ಜಾತ್ರಾ ಉತ್ಸವ ಕಾರ್ಯಕ್ರಮ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಬ್ರಹ್ಮ ಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಇಲ್ಲಿ ಡಿ.28 ಹಾಗೂ 29ರಂದು ಆದಿತ್ಯವಾರ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಾಲಗಣಪತಿಯನ್ನು ಪ್ರಧಾನ ದೇವರ ಸ್ಥಾನದಲ್ಲಿ ಪೂಜೆ ಮಾಡುವ ರಾಜ್ಯದ ಏಕೈಕ ದೇವಾಲಯ ಸಜೀಪದ ಅನ್ನಪಾಡಿಯಲ್ಲಿ ಇದೆ. ಕ್ಷೇತ್ರದಲ್ಲಿ ಭಕ್ತರ ಇಷ್ಟಾರ್ಥಗಳ ಈಡೇರಿಕೆಗೆ ಹವನ ನಡೆಯಲಿದೆ.ಆಯುಷ್ಯ ವೃದ್ದಿಗಾಗಿ ಹಾಗೂ ಸಮಸ್ತ ನಾಡಿನ ಜನರ ಸುಭೀಕ್ಷೆಗೆಗಾಗಿ ಮತ್ತು ಧಾರ್ಮಿಕ ಪ್ರಕ್ರಿಯೆಗಳು ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಶ್ರೀಬಾಲಗಣಪತಿ ಮೂಲ ಮಂತ್ರ ಲಕ್ಷಜಪ ಯಜ್ಞ ನಡೆಯಲಿದೆ ಎಂದು ತಿಳಿಸಿದರು.
ಅನ್ನಪ್ಪಾಡಿ ಶ್ರೀ ಬಾಲಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಯಶವಂತ ದೇರಾಜೆ ಮಾತನಾಡಿ, ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನಲೆಯುಳ್ಳ ಶ್ರೀ ಬಾಲಗಣಪತಿ ಸಾನಿಧ್ಯದಲ್ಲಿ ಡಿ.28ರಂದು ಬೆಳಿಗ್ಗೆ 9.30 ಕ್ಕೆ ಆರ್.ಎಸ್ ಎಸ್.ಪ್ರಮುಖರಾದ ಡಾ.ಕೆ.ಪ್ರಭಾಕರ್ ಭಟ್ ದೀಪಪ್ರಜ್ವಲನೆ ಮಾಡಲಿದ್ದಾರೆ.ಬಳಿಕ ಹೋಮ ಆರಂಭವಾಗಲಿದ್ದು, 12 ಗಂಟೆಗೆ ಪೂರ್ಣಹೂತಿಯಾಗಲಿದೆ ಮತ್ತು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶ್ರೀರ್ವಚನ ನೀಡಲಿದ್ದಾರೆ. ರಾತ್ರಿ ” ಬಿತ್ತಿಲ್ದ ಉಳ್ಳಾಲ್ತಿ ಅಪ್ಪೆ ಭಗವತಿ” ತುಳು
ಪೌರಾಣಿಕ ನಾಟಕ ನಡೆಯಲಿದೆ.
ಡಿ. 29 ರಂದು ಮಧ್ಯಾಹ್ನ 12 ರಂದು ಕಲಶಾಭಿಷೇಕ ಅಪರಾಹ್ನ 2 ಗಂಟೆಗೆ ” ಶ್ರೀ ಕೃಷ್ಣ ಸಂಧಾನ” ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ರಾತ್ರಿ ವೇಳೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಅನೇಕ ಜನಪ್ರತಿನಿಧಿಗಳು ಹಾಗೂ ಸಮಾಜದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಲಕ್ಷ ಜಪ ಯಜ್ಞ ಕಾರ್ಯಕ್ರಮಕ್ಕೆ ಸಮಿತಿ ಜೊತೆ ಊರಿನ ವೃದ್ದರು ಮಹಿಳೆಯರು ,ಮಕ್ಕಳು ಸಹಿತ ಪ್ರತಿಯೊಬ್ಬರು ಕೈಜೋಡಿಸಿ ಸಹಕಾರ ನೀಡುತ್ತಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲಿದ್ದಾರೆ.ವರ್ಷವಿಡೀ ಬಾಲಗಣಪತಿ ಪೂಜೆಯನ್ನು ಮಾಡುವ ಅವಕಾಶವನ್ನು ಭಕ್ತರಿಗೆ ಮುಂದಿನ ದಿನಗಳಲ್ಲಿ ಮಾಡಲಿದ್ದೇವೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಬಾಲಗಣಪತಿ ಮೂಲಮಂತ್ರ ಲಕ್ಷ ಜಪ ಯಜ್ಞ – ದೂರ್ವ ಹೋಮ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸಂಕೇಶ ಸಮಿತಿ ಸದಸ್ಯರುಗಳಾದ ರಮೇಶ್ ಅನ್ನಪ್ಪಾಡಿ, ಜಯಪ್ರಕಾಶ್ ಪೆರ್ವ, ಲಿಂಗಪ್ಪ ಎಸ್ ದೋಟ ಉಪಸ್ಥಿತರಿದ್ದರು















