ಬಂಟ್ವಾಳ: ಬಂಟ್ವಾಳ ಬಿಜೆಪಿ ಮಂಡಲದ ವತಿಯಿಂದ ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಸಹಕಾರಿ ಸಮಾವೇಶವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ನಿರೀಕ್ಷೆಗೂ ಮೀರಿ ಸಹಕಾರಿ ಕ್ಷೇತ್ರದಲ್ಲಿ ಗೆಲುವು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿ,ಸಹಕಾರಿ ಸಂಘದ ಚುನಾವಣೆಯ ಕಾರ್ಯವನ್ನು ಬಿಜೆಪಿ ಮಂಡಲ ಅತ್ಯಂತ ಯಶಸ್ವಿಯಾಗಿ ನಿಷ್ಠೆಯಿಂದ ನಿರ್ವಹಿಸಿದೆ. ಪ್ರತಿ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಿದರೆ ಮುಂದಿನ ಪ್ರತಿ ಚುನಾವಣೆಯ ಗೆಲುವು ನಮ್ಮದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು
ಸಂಸದ ಕ್ಯಾ ಬೃಜೇಶ್ ಚೌಟ ಮಾತನಾಡಿ ದಕ್ಷಿಣ ಕನ್ನಡ ಸಹಕಾರ ಕ್ಷೇತ್ರ ಅಧ್ಯಯನಯೋಗ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವದ ಯೋಜನೆಗಳನ್ನು ನಿರ್ದಿಷ್ಟ ಗುರಿಯೊಂದಿಗೆ ನಿಜವಾದ ಅರ್ಥದಲ್ಲಿ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಪ್ರೇರಣಾಧಾಯಕ ಶಕ್ತಿ ಬಂಟ್ವಾಳವಾಗಿದ್ದು, ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವವೇ ಕಾರಣ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ,
ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ, ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಸಹಕಾರಿ ಸಂಚಾಲಕ ರಾಜಾರಾಮ ಭಟ್ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ವಹಿಸಿದ್ದರು.ಈ ಸಂದರ್ಭ ಸಹಕಾರಿ ರತ್ನ ರವೀಂದ್ರ ಕಂಬಳಿ ಅವರನ್ನು ಹಾಗೂ ಸಹಕಾರಿ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಶ್ರಮಿಸಿದ ಪ್ರಕೋಷ್ಢದ ಸಂಚಾಲಕ ಜಯರಾಮ ರೈ ಅವರನ್ನು ಗೌರವಿಸಲಾಯಿತು.
ಅಭೂತಪೂರ್ವ ಗೆಲುವು ಸಾಧಿಸಿ, ಪಕ್ಷದಿಂದ ಗೌರವ ಸ್ವೀಕರಿಸಿದ ಸಹಕಾರಿ ಸಂಘಗಳ ಹೆಸರನ್ನು ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ ವಾಚಿಸಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸಹಕಾರಿ ಸಂಘಗಳು ನಿರ್ದೇಶಕರಗಳಾಗಿ ಆಯ್ಕೆಯಾದ ನಿರ್ದೇಶಕರುಗಳಿಗೆ ಗೌರವಾರ್ಪಣೆ ಮಾಡಲಾಯಿತು.
ಬಂಟ್ವಾಳ ಮಂಡಲ ಸಹಕಾರಿ ಪ್ರಕೋಷ್ಠ ಸಂಚಾಲಕ ಜಯರಾಮ ರೈ ಸ್ವಾಗತಿಸಿದರು. ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.














