ಬಂಟ್ವಾಳ:ಪ್ರತಿ ಬಾರಿ ಹೊಸತನದೊಂದಿಗೆ ಹಲವಾರು ವಿಶೇಷತೆಗಳನ್ನೊಳಗೊಂಡು ಹಬ್ಬದ ರೀತಿಯಲ್ಲಿ ಆಯೋಜನೆಗೊಳ್ಳುವ ಮುಡೂರು -ಪಡೂರು ಜೋಡುಕರೆ 'ಬಂಟ್ವಾಳ ಕಂಬಳೋತ್ಸವ'ವು ಮಾ.7 ಹಾಗೂ 8 ರಂದು ನಾವೂರು-ಕೂಡಿಬೈಲಿನಲ್ಲಿ ಅದ್ದೂರಿಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಅವರು ಫೆ 26 ರಂದು ಬಿ ಸಿ ರೋಡನ ಸ್ಪರ್ಶ ಕಲಾ ಮಂದಿರದಲ್ಲಿ ಕಂಬಳೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೂಡೂರು-ಪಡೂರು ಕಂಬಳವು ಪ್ರಾರಂಭದಿಂದಲೂ ಹಲವು ವಿಶೇಷತೆಯಿಂದ ನಡೆಯಿತಿದ್ದು ಬೇಡಿಕೆಯ ಸಿನಿಮಾ ನಟ ನಟಿಯರು, ಪ್ರಸಿದ್ಧ ರಾಜಕಾರಣಿಗಳು, ಹಾಗೂ ಹೆಚ್ಚು ಮಹಿಳೆಯರ ಭಾಗವಹಿಸುವಿಕೆ ಈ ಕಂಬಳದಿಂದಲೇ ಆರಂಭವಾಗಿತ್ತು ಎಂದರು.
ಈ ಬಾರಿಯ ಕಂಬಳೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ,ಗೃಹ ಸಚಿವ ಡಾ ಜಿ ಪರಮೇಶ್ವರ್ ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್, ಸಚಿವರುಗಳಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ ಸಹಿತ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಲೂರು ಕರ್ನಾಟಕ ಆರ್ಯ-ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು, ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಸ್ಪತಿ ಡಾ ಸಂತೋಷ್ ಗುರೂಜಿ, ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂದನೀಯ ರಾಬರ್ಟ್ ಡಿಸೋಜ, ಆಳದಂಗಡಿ ಅರಮನೆ
ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ್ ಅಜಿಲ ಸಹಿತ ಹಲವು ಗಣ್ಯರು ಉಪಸ್ಥಿತರಿರುವರು. ಎಲ್ಲ ರೀತಿಯಲ್ಲೂ ಜಿಲ್ಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಮೂಡೂರು ಪಡೂರು ಕಂಬಳವು ಜಾತ್ಯತೀತ, ಸಾಮರಸ್ಯದ ಕಂಬಳವಾಗಿ ಮೂಡಿ ಬರುತ್ತಿದೆ ಎಂದರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಮಾತನಾಡಿ, ಈ ಬಾರಿ ಕಂಬಳ ಗದ್ದೆಯಲ್ಲಿ ಬೃಹತ್ ಗಾತ್ರದ ಶಾಶ್ವತ ವೇದಿಕೆ ಹಾಗೂ ಶಾಶ್ವತ ಫ್ಯಾನ್ ಅಳವಡಿಸಲಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕಂಬಳ ಸ್ಥಳಕ್ಕೆ ಬರಲು ಪರ್ಯಾಯ ರಸ್ತೆಗಳು ಸಿದ್ದವಾಗಿದೆ ಹಾಗೂ ವಿಶೇಷವಾಗಿ ಕಂಬಳದ ಮೆರುಗನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಹಾರ ಮೇಳ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿ ಸಂಚಾಲಕ ಬಿ ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತುರು, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ಉಪಾಧ್ಯಕ್ಷರುಗಳಾದ ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಸುದರ್ಶನ್ ಜೈನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್,ಡೆಂಜಿಲ್ ಮತ್ತಿತರರು ಉಪಸ್ಥಿತರಿದ್ದರು.














