ಬಂಟ್ವಾಳ:ದೇಶದಲ್ಲಿ ಪೋಲಿಯೋ ಮುಕ್ತಗೊಳಿಸಲು ಅವಿರತ ಶ್ರಮಿಸಿದ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಸದಸ್ಯರು ಸೇವೆಯಿಂದಲೇ ಸಂತೃಪ್ತಿ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಎ.ಆರ್.ರವೀಂದ್ರ ಭಟ್ ಹೇಳಿದ್ದಾರೆ.
ಇಲ್ಲಿನ ಮೊಡಂಕಾಪು ರೋಟರಿ ಕ್ಲಬ್ ವತಿಯಿಂದ ಸೋಮವಾರ ರಾತ್ರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು. ಆರಂಭದಲ್ಲಿ ಕೊಡಂಗೆ ಸರ್ಕಾರಿ ಪ್ರೌಢಶಾಲೆ ಮತ್ತು ಮೊಡಂಕಾಪು ದೀಪಿಕಾ ಪ್ರೌಢಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರ ರಾಯಿ ಆನಾರೋಗ್ಯಪೀಡಿತ ಕುಟುಂಬಕ್ಕೆ ಸಹಾಯಧನ, ಬಾಳ್ತಿಲ ಬಡ ಕುಟುಂಬದ ಮನೆಗೆ ಟೈಲ್ಸ್ ಅಳವಡಿಕೆ, ಸ್ವಚ್ಛ ಭಾರತ ಜಾಗೃತಿ ಅಭಿಯಾನ ಬ್ಯಾನರ್ ಅನಾವರಣಗೊಳಿಸಿದರು.
ಇದೇ ವೇಳೆ ಪೌರ ಕಾರ್ಮಿಕರು ಸಹಿತ ಸಾಧಕರಿಗೆ ಸನ್ಮಾನ ಮತ್ತು ಕ್ಲಬ್ಬಿನ
ನಿಯೋಜಿತ ಅಧ್ಯಕ್ಷ ಡಾ.ಗೋವರ್ಧನ ರಾವ್ ಅಂಗಾಂಗ ದಾನ ಘೋಷಣೆ ನಡೆಯಿತು.
ಸಹಾಯಕ ಗವರ್ನರ್ ಸುರೇಂದ್ರ ಕಿಣಿ, ವಲಯ ಕಾರ್ಯದರ್ಶಿ ಜಯರಾಮ ರೈ, ಕ್ಲಬ್ಬಿನ ಮಾರ್ಗದರ್ಶಕ ಬಿ.ಸಂಜೀವ ಪೂಜಾರಿ, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಶುಭ ಹಾರೈಸಿದರು. ಮಾಜಿ ಸಚಿವ ಬಿ.ರಮಾನಾಥ ರೈ, ಮೊಡಂಕಾಪು ಚರ್ಚ್ ನ ಧರ್ಮಗುರು ವಲೇರಿಯನ್ ಡಿಸೋಜ ಮತ್ತಿತರರು ಭೇಟಿ ನೀಡಿದರು.
ಕ್ಲಬ್ಬಿನ ಅಧ್ಯಕ್ಷ ಇಲ್ಯಾಸ್ ಸ್ಯಾಂಕ್ಟಿಸ್ ಸ್ವಾಗತಿಸಿ, ಕಾರ್ಯದರ್ಶಿ ಪಿ.ಎ.ರಹೀಂ ವಂದಿಸಿದರು. ಮುಸ್ತಾಫ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು














