ಬಂಟ್ವಾಳ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯವನ್ನು ರಾಜ್ಯ ಸರಕಾರ ಜಾರಿಗೊಳಿಸಿರುವ " ದೈವ ಸಂಕಲ್ಪ" ಯೋಜನೆಯಡಿ ಸೇರಿಸಿಕೊಳ್ಳುವ ಮೂಲಕ ಸಮಗ್ರವಾಗಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ರಾಜ್ಯದ ಮುಜರಾಯಿ ಸಚಿವೆ ಜೊಲ್ಲೆ ಶಶಿಕಲಾ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಗುತ್ತು ಅವರು ಮನವಿ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿ ಹರಿಯುವ ಫಲ್ಗುಣಿ ನದಿ ತೀರದಲ್ಲಿರುವ ಮಾರ್ಕಾಂಡೇಯ ಪುರಾಣದಲ್ಲಿ ಉಲ್ಲೇಖವಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಕರ್ನಾಟಕ ಸರಕಾರದ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ "ಎ" ಗ್ರೇಡ್ ದೇವಸ್ಥಾನವಾಗಿದ್ದು, ಈ ದೇವಾಲಯದಲ್ಲಿ ಆರಾಧಿಸಲ್ಪಡುವ ದೇವಿಯು ಮೃಣ್ಮಯ ಮೂರ್ತಿಯಾಗಿದೆ. ಸುರತ ಮಹಾರಾಜನಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ದೇವಾಲಯವು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿರುವ ಬಗ್ಗೆಯು ಶಾಸನಗಳಿವೆ ಎಂದು ಶಾಸಕರು ಮನವಿಯಲ್ಲಿ ವಿವರಿಸಿದ್ದಾರೆ.
ಎರಡು ವರ್ಷಗಳ ಹಿಂದೆ ನವೀಕರಣಗೊಂಡ ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಅತ್ಯಂತ ಪವಿತ್ರ ಕ್ಷೇತ್ರವು ಆಗಿದೆ. ಮಾರ್ಚ್ ಮತ್ತು ಎಪ್ರಿಲ್ ತಿಂಗಳ ಮಧ್ಯದಲ್ಲಿ ಶ್ರೀಕ್ಷೇತ್ರದ ವಾರ್ಷಿಕ ಜಾತ್ರೆಯು
ಪೂರ್ತಿ ಒಂದು ತಿಂಗಳು ನಡೆಯುತ್ತಿರುವುದು ಇಲ್ಲಿನ ವಿಶೇಷತೆಯಲ್ಲೊಂದಾಗಿದೆ.ಈ ಸಂದರ್ಭ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ ಎಂದು ಶಾಸಕ ರಾಜೇಶ್ ನಾಯ್ಕ್ ಮನವಿಯಲ್ಲಿ ತಿಳಿಸಿದ್ದಾರೆ. ಹಾಗಾಗಿ ಕ್ಷೇತ್ರದ ಮೂಲಸೌಕರ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಯ ಹಿನ್ನಲೆಯಲ್ಲಿ " ದೈವ ಸಂಕಲ್ಪ" ಯೋಜನೆಯಡಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯವನ್ನು ಸೇರಿಸಿಕೊಳ್ಳುವಂತೆ ಶಾಸಕರು ಸಚಿವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಜೊತೆಗೆ ಅತೀ ಹೆಚ್ಚು ಧಾರ್ಮಿಕ ಶೃದ್ದಾ ಕೇಂದ್ರಗಳನ್ನು ಹೊಂದಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಹುತೇಕ ಎಲ್ಲಾ ದೈವಸ್ಥಾನ ,ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದ್ದು, ಈ ಎಲ್ಲಾ ದೈವ,ದೇವಸ್ಥಾನಗಳಿಗೂ ಮೂಲಭೂತ ಸೌಕರ್ಯಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ಅನುದಾನವನ್ನು ಒದಗಿಸುವಂತೆಯೂ ಮನವಿಯಲ್ಲಿ ಆಗ್ರಹಿಸಿದ್ದಾರೆ.














