ಬಂಟ್ವಾಳ : ಐತಿಹಾಸಿಕ ಹಿನ್ನಲೆಯುಳ್ಳ,ಫರಂಗಿಪೇಟೆಯ ವಿಜಯನಗರದಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿಯ ಮತ್ತು ಶ್ರೀ ರಾಮನಾಮ ತಾರಕ ಜಪ ಯಜ್ಞ ಸಮಿತಿ ಅಶ್ರಯದಲ್ಲಿ ಶ್ರೀ ರಾಮನಾಮ ತಾರಕ ಜಪ ಯಜ್ಞ ಹಾಗೂ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜಾ ಕಾರ್ಯಕ್ರಮ ಡಿ.24,25ರಂದು ನಡೆಯಲಿದೆ ಎಂದು ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷ ಕೊಡಮಣ್ಣು ಕಾಂತಪ್ಪ ಶೆಟ್ಟಿ ಹೇಳಿದರು.
ಆವರು ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ದೇವಾಲಯಕ್ಕಾಗಿ ದಾನಿಯೋರ್ವರು ಜಮೀನು ಉದಾರವಾಗಿ ನೀಡಿರುತ್ತಾರೆ ಹಾಗೂ ಅದಕ್ಕೆ ಹೊಂದಿಕೊಂಡಿರುವ 2.40 ಎಕ್ರೆ ಜಮೀನು ಖರೀದಿಸಲಾಗಿದ್ದು, ದೇವರ ಭಕ್ತರೆ ಮನೆ ಕಟ್ಟಿಕೊಂಡು ವಾಸಿಸುವ ನಿಟ್ಟಿನಲ್ಲಿ 25 ಮನೆ ನಿವೇಶನಗಳನ್ನು ರಚಿಸಿ ಮಾರಾಟ ಮಾಡಲಾಗಿದೆ ಎಂದರು.
ಶ್ರೀ ರಾಮನಾಮ ತಾರಕ ಜಪ ಯಜ್ಞದ ಪೂರ್ವಭಾವಿಯಾಗಿ ಡಿ.22ರಂದು ಸಂಜೆ 3 ಗಂಟೆಯಿಂದ ಬ್ರಹ್ಮರಕೊಟ್ಲು ಬ್ರಹ್ಮ ಸನ್ನಿದಿಯಿಂದ ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು ಡಿ.24ರಂದು ಬೆಳಿಗ್ಗೆ 7ರಿಂದ ಯಜ್ಞ ಪ್ರಾರಂಭವಾಗಿ 11.00 ಗಂಟೆಗೆ ಪೂರ್ಣಹುತಿ.ಬಳಿಕ 11.30 ಕ್ಕೆ ನಡೆಯುವ ಸುಧರ್ಮ ಸಭೆಯಲ್ಲಿ ಖ್ಯಾತ ಚಿಂತಕರಾದ ಶ್ರೀ ರೋಹಿತ್ ಚಕ್ಕಲೇರ್ಥ ಶ್ರೀ ರಾಮ ಪಥದರ್ಶನ ಉಪನ್ಯಾಸ ನೀಡಲಿದ್ದಾರೆ. ಶ್ರೀ ನರೇಂದ್ರ ನಾಯಕ್ ಮಂಗಳೂರು ಸಭೆಯ ಅಧ್ಯಕ್ಷತೆ ವಹಿಸುತ್ತಾರೆ.ನಂತರ ಶ್ರೀ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ “ಶ್ರೀರಾಮ ನಿರ್ಯಾಣ” ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ದಿನಾಂಕ 25ರಂದು ಆದಿತ್ಯವಾರ ಪೂರ್ವಾಹ್ನ ಗಂಟೆ 10.40 ಕ್ಕೆ ಶ್ರೀ ಆಂಜನೇಯ ದೇವರ ಭವ್ಯ ದೇಗುಲ ನಿರ್ಮಾಣದ ಸಂಕಲ್ಪದೊಂದಿಗೆ ಉಡುಪಿ ಶ್ರೀ ಅದಮಾರು ಮಠದ ಯತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ಅಮೃತ ಹಸ್ತದಲ್ಲಿ ದೇವಾಲಯದ ಶಿಲಾನ್ಯಾಸ ನೆರವೇರಲಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ
ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಯವರು ವಹಿಸಲಿದ್ದು, ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದರು ದೀಪ ಪ್ರಜ್ವಲನೆ ಮಾಡಲಿದ್ದಾರೆ ಹಾಗೂ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷ ಅಜಿತ್ ಚೌಟ,ಪ್ರ. ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಜಪ ಯಜ್ಞ ಸಮಿತಿ ಅಧ್ಯಕ್ಷ ಅನಿಲ್ ಪಂಡಿತ್,ಕೆ ಜಿ ವಿಠ್ಠಲ ಆಳ್ವ, ಚಂದ್ರ ಶೇಖರ ಗಾಂಭೀರ ಸುಜಿರ್ ಗುತ್ತು, ಕರುಣಾಕರ ಕೊಟ್ಟಾರಿ ಅರ್ಕುಲ, ಮನೋಜ್ ತುಪ್ಪಕಲ್ಲು, ದಾಮೋದರ ನೆತ್ತರಕೆರೆ,ದಿನೇಶ್ ಶೆಟ್ಟಿ ಕೊಟ್ಟಿಂಜ, ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ತಯಾರಿಯಲ್ಲಿ ನಿರತರಾದ ಮಾತೆಯರು:
ಡಿ. 24 ರಂದು ನಡೆಯುವ ಶ್ರೀರಾಮ ನಾಮ ತಾರಕ ಜಪಯಜ್ಞ ಯಶಸ್ಸಿಗಾಗಿ ಜಪಯಜ್ಞಸಮಿತಿಯ ಜೊತೆ ಸ್ಥಳೀಯ ಯುವಕರ ತಂಡ ಹಗಲಿರುಳು ಶ್ರಮಿಸುತ್ತಿದೆ.ಜೊತೆಗೆ ಪರಿಸರದ ಮಹಿಳೆಯರು ಕೂಡ ಪ್ರತಿದಿನ ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ಕೆಲಸಕಾರ್ಯದಲ್ಲಿ ತೊಡಗಿಸಿಕೊಂಡು ಗಮನಸೆಳೆಯುತ್ತಿದ್ದಾರೆ.ಜಪಯಜ್ಞಕ್ಕಾಗಿ ಈಗಾಗಲೇ ಒಂದು ದೊಡ್ಡ ಹೋಮಕುಂಡ ಹಾಗೂ 7 ಸಣ್ಣ ಹೋಮಕುಂಡಗಳು ನಿರ್ಮಾಣಗೊಂಡಿದೆ.ಈ ಜಪಯಜ್ಞದಲ್ಲಿ ಸುಮಾರು 10 ಸಾವಿರಕ್ಕು ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.ಈ ಜಪಯಜ್ಞದಿಂದಾಗಿ ಪರಂಗಿಪೇಟೆ ಸುತ್ತಮುತ್ತಲಿನ 8 ಗ್ರಾಮದಲ್ಲಿರುವ ಸಮಸ್ತ ಹಿಂದೂ ಸಮಾಜವನ್ನು ಜೋಡಿಸುವ ದೇಶಪ್ರೇಮದ ಜಾಗೃತಿಯ ಜೊತೆಗೆಅಪರೂಪದ ಬದಲಾವಣೆಯ ಚಿತ್ರಣ ಕಂಡುಬಂದಿದೆ














