Coastal Bulletin

ಬಂಟ್ವಾಳ; ಶ್ರೀಕೃಷ್ಣ, ಏಸು, ಮಹಮ್ಮದ್ ಫೈಗಂಬರ್ ಇಂತಹ ಸೃಷ್ಟಿಕರ್ತರ ಸೃಷ್ಟಿಯಲ್ಲಿ ಪಂಚತತ್ವಗಳು ವಿಕಾಸಗೊಂಡು ಜಗತ್ತಿನ ಸರ್ವ ಜೀವಿಗಳ ಸೃಷ್ಟಿ ಗೆ ಕಾರಣವಾಯಿತು ಎಂದು ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರ, ಶ್ರೀಧಾಮ ಮಾಣಿಲ ಶ್ರೀ ಶ್ರೀ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಅವರು ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಸಮಿತಿ ಬಂಟ್ವಾಳ ಇವರ ಆಶ್ರಯದಲ್ಲಿ ಬಂಟ್ವಾಳ ಮತ್ತು ಪಾಣೆ ಮಂಗಳೂರು ಮಹಿಳಾ ಕಾಂಗ್ರೆಸ್ ಇವರ ಸಹಕಾರದೊಂದಿಗೆ ಮೊಡಂಕಾಪು ಚರ್ಚ್ ಮೈದಾನ ದಲ್ಲಿ ಕ್ರಿಸ್ಮಸ್ ಸೌಹಾರ್ದ ಸಂಭ್ರಮ 2022 ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ಆಗಂತಕಾರಿಯ, ಅತ್ಯಂತ ಕ್ಲಿಷ್ಟಕರವಾದ ಜಗತ್ತಿನಲ್ಲಿ ಪ್ರೀತಿ ವಿಶ್ವಾಸ ನಂಬಿಕೆಯ ಜೀವನಕ್ಕೆ ಪೂರಕವಾದ ಪರಿಸ್ಥಿತಿಯ ನಿರ್ಮಾಣಕ್ಕಾಗಿ ಪರಿವರ್ತನೆಯ ಕಾರ್ಯ ಸೌಹಾರ್ದ ಕ್ರಿಸ್ಮಸ್ ಸಂಭ್ರಮದ ಮೂಲಕ ನಡೆಯುತ್ತದೆ.

ಮತೀಯವಾದದ ಸನ್ನಿವೇಶದಲ್ಲಿ ಹೆಸರಿನಲ್ಲಿ ನೋವು , ರಕ್ತಪಾತ ಮಾಡುವುದು ಸರಿಯಲ್ಲ, ಎಲ್ಲಾ ಧರ್ಮ ಗುರುಗಳು ಈ ಜಗತ್ತಿನಲ್ಲಿ ಶಾಂತಿಯ ಸುವ್ಯವಸ್ಥೆ ಗಾಗಿ ಒಂದಾಗಿ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.

ಮಕ್ಕಳ ಭವಿಷ್ಯದ ಬಗ್ಗೆ ಪ್ರತಿಯೊಬ್ಬ ರು ಚಿಂತನೆ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅವರು ಹೇಳಿದರು. ಮತಿಭ್ರಮಣೆಯಿಂದ ಹಿಂಸೆಯ ಅಂಧಕಾರದಲ್ಲಿ ಯುವ ಪೀಳಿಗೆಗೆ ಮುಳುಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಬಂಟ್ವಾಳ ವಲಯ ಪ್ರಧಾನ ಧರ್ಮಗುರುಗಳಾದ ಅತೀ ವಂ| ವಲೇರಿಯನ್ ಡಿ’ಸೋಜ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸೇವೆ ಮಾಡಿದರೆ ಭಗವಂತನ ದರ್ಶನವಾಗುತ್ತದೆ. ಇಂತಹ ಉತ್ತಮ ಕಾರ್ಯದ ಮೂಲಕ ಸಮಾಜದ ಜವಬ್ದಾರಿ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ್

ರೈ ಅವರು ಏಸುಕ್ರಿಸ್ತರು ನೀಡಿದ ಸಂದೇಶ ವರ್ತಮಾನ ಕಾಲದಲ್ಲಿ ಹೆಚ್ಚು ಅರ್ಥಪೂರ್ಣವಾಗಿ ಅನುಷ್ಠಾನವಾಗಬೇಕಿದೆ, ಅಸಹಿಷ್ಣುತೆ ನಮ್ಮೆಲ್ಲರ ನೆಮ್ಮದಿ ಕೆಡಿಸುತ್ತಿದೆ, ಜನಾಂಗೀಯ ಘರ್ಷಣೆ ನಡೆದ ದೇಶಗಳು ನಾಶವಾಗಿದೆ, ಹೀಗಾಗಿ ನಾವೆಲ್ಲರೂ ಪರಸ್ಪರ ಪ್ರೀತಿಸುವ ಮೂಲಕ ಒಂದು ಮಾನವೀಯ ಸಮಾಜವನ್ನು ಕಟ್ಟುವ ಸಂಕಲ್ಪ ಮಾಡಬೇಕು, ಇದಕ್ಕೆ ಇಂದಿನ ಕಾರ್ಯಕ್ರಮ ಹೆಚ್ಚು ಪೂರಕವಾಗಿದೆ. ದ್ವೇಷ ಮಾಡುವ ಮನಸ್ಸು ಕೊಡದೆ, ಪರಸ್ಪರ ಪ್ರೀತಿಸುವ ಮನಸ್ಸನ್ನು ದೇವರು ಎಲ್ಲರಿಗೂ ದಯಪಾಲಿಸಬೇಕು. ದ್ವೇಷಕ್ಕೆ ಪ್ರೀತಿ ಉತ್ತರವಾಗಲಿ, ಹಿಂಸೆಗೆ ಅಹಿಂಸೆ ಉತ್ತರವಾಗಲಿ ಎಂದವರು ಕರೆ ನೀಡಿದರು. ಸುಂದರ, ಭಾತೃತ್ವದ, ಭಾವೈಕ್ಯತೆಯ ಸಮಾಜ‌ಆಗುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಅತೀ ವಂ| ಪಾವುಸ್ತಿನ್ ಲೋಬೋ ಧರ್ಮಗುರುಗಳು, ಇಮ್ಯಾಕುಲೇಟ್ ಕಾನ್ಸೆಪ್ಶನ್ ಚರ್ಚ್, ಕಿನ್ನಿಗೋಳಿ, ಜ.ಮೊಹಮ್ಮದ್ ಕುಂಇ ಸೌಹಾರ್ದ ಸಂದೇಶ ಸಾರಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಲವೀನಾ ವಿಲ್ಮಾಮೊರಾಸ್ ಉಪಸ್ಥಿತರಿದ್ದರು.

ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಸಭಾ ಕಾರ್ಯಕ್ರಮಕ್ಕೂ ಮುನ್ನ ಬಿಸಿರೋಡಿನ ಸರ್ಕಲ್ ಬಳಿಯಿಂದ ಸೌಹಾರ್ದ ಬೈಕ್ ರ್ಯಾಲಿ ಹಾಗೂ ಕ್ರಿಸ್ಮಸ್ ಸ್ತಬ್ಧ ಚಿತ್ರಗಳನ್ನೊಳಗೊಂಡ ವಾಹನ ಜಾಥವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.

ಕ್ರಿಸ್ಮಸ್ ಸೌಹಾರ್ದ ಸಂಭ್ರಮ ಸಮಿತಿ ಬಂಟ್ವಾಳ ಇದರ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್ ಸ್ವಾಗತಿಸಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Leave a Comment