ಬಂಟ್ವಾಳ: ಜಿಲ್ಲೆಯಲ್ಲಿ ಕಳೆದ 20 ವರ್ಷಗಳ ರಾಜಕಾರಣದಲ್ಲಿ 14 ವರ್ಷ ಸಂಸದನಾಗಿ, ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಏರಲು ಬಿಜೆಪಿ ಕಾರ್ಯಕರ್ತರು ಪ್ರಮುಖ ಕಾರಣವಾಗಿದ್ದು, ಕೆಲವೊಮ್ಮೆ ವಿವಿಧ ಟೀಕೆ ಮತ್ತು ಅನಗತ್ಯ ಆರೋಪಗಳನ್ನು ಕೂಡಾ ಮೌನವಾಗಿಯೇ ಎದುರಿಸಿದ್ದೇನೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತಗೊಳಿಸಿ, ದೇಶದಲ್ಲಿ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಲು ಗೆಲ್ಲಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕ ನಿಕಟಪೂರ್ವ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸ್ಪರ್ಶ ಸಭಾಂಗಣದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ಬುಧವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಎಂದಿಗೂ ಅಧಿಕಾರದ ಹಿಂದೆ ಹೋಗಿಲ್ಲ ಮತ್ತು ಕಟೀಲು ದೇವರ ಸಾಕ್ಷಿಯಾಗಿ ಭ್ರಷ್ಟಾಚಾರ, ಗುಂಪುಗಾರಿಕೆ ಮಾಡಿಲ್ಲ. ನೂತನ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಜೊತೆಗೆ ಮತ್ತೆ ರಾಜ್ಯಾದ್ಯಂತ ಸುತ್ತಾಡಿ 28 ಲೋಕಸಭಾ ಕ್ಷೇತ್ರ ಗೆಲ್ಲಿಸುವುದಾಗಿ ಅವರು ಹೇಳಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ನನ್ನನ್ನು ರಾಜಕಾರಣಕ್ಕೆ ಕರೆ ತರುವಲ್ಲಿ ಸಂಸದ ನಳಿನ್ ಪಾತ್ರ ಮಹತ್ವದ್ದು. ಮುಂದಿನ ದಿನಗಳಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುವುದರ ಜೊತೆಗೆ ನನ್ನ ಅವಧಿ ಮುಗಿದ ಬಳಿಕ ರಾಜಕೀಯ ಸ್ಪರ್ದೇಯಿಂದ ಹಿಂದೆ ಸರಿಯುವುದಾಗಿ ಇಂಗಿತ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕಿಯೋನಿಕ್ಸ್ ಮಾಜಿ
ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಸಂಸದ ನಳಿನ್ ವಿರುದ್ಧ ಅನಗತ್ಯ ಟೀಕೆ ಸಲ್ಲದು ಎಂದರು. .
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ರಾಮದಾಸ ಬಂಟ್ವಾಳ, ಕಸ್ತೂರಿ ಪಂಜ, ಸಂತೋಷ್ ಕುಮಾರ್ ರೈ ಬೋಳಿಯಾರು, ಸುಲೋಚನಾ ಜಿ.ಕೆ.ಭಟ್ ಮತ್ತಿತರರು ಇದ್ದರು.
ಬೂಡ ಮಾಜಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕಳೆದ ಹದಿನಾಲ್ಕುವರೆ ವರ್ಷದಲ್ಲಿ ಸಂಸದ ನಳಿನ್ ಅವರು ಜಿಲ್ಲೆಗೆ ವಿವಿಧ ಯೋಜನೆಯಡಿ ಒಟ್ಟು ರೂ 96 ಸಾವಿರ ಕೋಟಿಗೂ ಮಿಕ್ಕಿ ಅನುದಾನ ತರುವ ಮೂಲಕ ಟೀಕೆಗೆ ಅಭಿವೃದ್ಧಿ ಮೂಲಕ ಉತ್ತರಿಸಿದ್ದಾರೆ ಎಂದರು.
ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರವೀಶ ಶೆಟ್ಟಿ ಕರ್ಕಳ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು.














