ಹಿರಿಯ ನಾಗರೀಕರ ಹಕ್ಕು ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ನಮ್ಮ ದುರ್ದೈವ: ಉದಯಾನಂದ ಎ.

Coastal Bulletin
ಹಿರಿಯ ನಾಗರೀಕರ ಹಕ್ಕು ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ನಮ್ಮ ದುರ್ದೈವ: ಉದಯಾನಂದ ಎ.

ಬಂಟ್ವಾಳ: ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಇದರ ವಾರ್ಷಿಕ ಮಹಾ ಸಭೆ ಮತ್ತು ಹಿರಿಯ ನಾಗರಿಕ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡು, ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಂಗಳೂರಿನ ಹಿರಿಯ ನ್ಯಾಯವಾದಿ ಹಾಗೂ ಸರಕಾರಿ ಅಭಿಯೋಜಕರಾದ ಶ್ರೀ ಉದಯಾನಂದ ಎ ರವರು ಮಾತನಾಡುತ್ತಾ ಒಂದು ಕಾಲದಲ್ಲಿ ಅವಿಭಕ್ತ ಕುಟುಂಬಹೊಂದಿ ಹಿರಿಯರಿಂದಲೇ ಮಾರ್ಗದರ್ಶನ ಪಡೆಯುತ್ತಿದ್ದ ದೇಶದಲ್ಲಿ ಇಂದು ಹಿರಿಯ ನಾಗರೀಕರ ಹಕ್ಕು ರಕ್ಷಣಾ ಕಾಯ್ದೆ ಜಾರಿಗೆ ಬಂದಿರುವುದು ನಮ್ಮ ದುರ್ದೈವ ಎಂದು ಹೇಳುತ್ತಾ ಹಳೆ ಬೇರು ಹೊಸ ಚಿಗುರು ಕೂಡೆ ಮರ ಸೊಗಸು ಎಂಬಂತೆ ಹಿರಿಯರು ಕಿರಿಯರು ಜೊತೆ ಸೇರಿದಾಗ ಸಮಾಜ ಬಾಂಧವ್ಯ ಬೆಳೆಯುವುದರೊಂದಿಗೆ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯ ಪಟ್ಟರು. ಇನ್ನೊಬ್ಬ ಕವಿಗಳ ಮಾತನ್ನು ಉದ್ಧರಿಸುತ್ತಾ ಮುಂದೆ ಗುರುಯಿತ್ತು ಹಿಂದೆ ಗುರುವಿದ್ದ ಕಾಲವೊಂದಿತ್ತು ಆಗ ಯುವಕರು ದಾರಿ ತಪ್ಪದೆ ನಡೆಯಲು ಸಾಧ್ಯವಾಯಿತು. ಇಂದು ಗುರಿಯಿಲ್ಲ ಗುರುವಿಲ್ಲದುದರಿಂದ ಗೊತ್ತು ಗುರಿಯಿಲ್ಲದೆ ಯುವಕರ ದಂಡು ಸಾಗುತ್ತಾ ಸಮಾಜದಲ್ಲಿ ನೆಮ್ಮದಿ ಹಾಳಾಗಿದೆ ಈ ನಿಟ್ಟಿನಲ್ಲಿ ಇಂತಹ ಹಿರಿಯರ ಸಂಘಟನೆಗಳು ಕನಿಷ್ಟ ಹಿರಿಯರಿಗಾದರೂ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗುತ್ತದೆ ಎಂದು ತಿಳಿಸಿ ಕಿರಿಯರು ಹಿರಿಯರ ಮಾರ್ಗದರ್ಶನದಲ್ಲಿನ ನಡೆಯಬೇಕು ಎಂದು ಹೇಳುತ್ತಾ ಈ ಸಂಘ ಸಮಾಜಕ್ಕೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಅಧ್ಯಕ್ಷರಾದ ಶ್ರೀ ಭಾಸ್ಕರ ಪೆರುವಾಯಿ ಮಾತನಾಡುತ್ತಾ ನಮ್ಮೆಲ್ಲರಿಗೂ ಇಂತಹ ಸಂಘಟನೆಗಳು ಮಾರ್ಗದರ್ಶನವಾಗುತ್ತದೆ. ಮಾತ್ರವಲ್ಲ ಹಿರಿಯರ ವೇದಿಕೆಯಲ್ಲಿ ಕಿರಿಯರನ್ನು ಅತಿಥಿಗಳಾಗಿ ಆಹ್ವಾನಿಸಿ ಗೌರವಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಮುಂದೆ ಈ ಸಂಘದ ಕಟ್ಟಡ ಅಥವಾ ಯಾವುದೇ ಕಾರ್ಯ ಚಟುವಟಿಕೆಗಳಿಗೆ ನಮ್ಮಿಂದ ಗರಿಷ್ಠ ಸಹಕಾರವನ್ನು ನೀಡುವ ಭರವಸೆ ನೀಡಿದರು.

ಇನ್ನೋರ್ವ ಅತಿಥಿ ರಮಾನಂದ ನಾರಾಯಣ ಬಂಗೇರ ವಸ್ತ್ರೋದ್ಯಮಿಗಳು ನಾಸಿಕ್ ರವರು ಮಾತನಾಡಿ ಸಂಘದ ಕಾರ್ಯ ಚಟುವಟಿಕೆ, ಹಿರಿಯರಿಗೆ ಸನ್ಮಾನ ಇದೆಲ್ಲವೂ ಉಳಿದ ಸಂಘಗಳಿಗೆ ಮಾದರಿಯಾಗಿದೆ. ಇದೇ ರೀತಿ ಸಂಘ ಮುಂದುವರಿದು ಹಿರಿಯ ನಾಗರಿಕರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವಲ್ಲಿ ಯಶ್ವಸಿಯಾಗಲಿ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಶ್ರೀ ಮನೋಜ್ ಬಾಸಬೈಲು ಉದ್ಯಮಿಗಳು, ಶ್ರೀ ರಮೇಶ ಸಂಚಯಗಿರಿ ಅಧ್ಯಕ್ಷರು ಕುಲಾಲ ಸುಧಾರಕ ಸಂಘ(ರಿ) ಬಂಟ್ವಾಳ. ಶ್ರೀ ಸುಮಿತ್ ಸಾಲಿಯಾನ್ ಅಧ್ಯಕ್ಷರು ಕರ್ನಾಟಕ ರಾಜ್ಯ ಕರಾವಳಿ ಕುಲಾಲರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ), ಬಂಟ್ವಾಳ ಘಟಕ ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸೋಮಯ್ಯ ಹನೈನಡೆಯವರು ನಾವು ಹಿರಿಯರಾದರೂ ಒಂದೇ ಮನಸ್ಸಿನಿಂದ

ಕೆಲಸ ಮಾಡಿದಾಗ ಇಂತಹ ಶಿಸ್ತು ಬದ್ಧ ಕಾರ್ಯಕ್ರಮ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ದುಡಿದ ಎಲ್ಲಾ ಕರ‍್ಯಕಾರೀ ಸಮಿತಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿ ಜೀವನದಲ್ಲಿ, ದುಡಿದುದರಲ್ಲಿ ಒಂದಿಷ್ಟನ್ನು ಹಂಚಿ ತಿಂದಾಗ ನಮಗೆ ಆತ್ಮತೃಪ್ತಿ ದೊರಕುವುದರೊಂದಿಗೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಗೌರವಾಧ್ಯಕ್ಷರಾದ ಶ್ರೀ ಟಿ. ಶೇಷಪ್ಪ ಮಾಸ್ಟರ್ ಮಾತನಾಡಿ ನಮ್ಮ ಸಂಘ ಪ್ರಾರಂಭವಾಗಿ ೬ನೇ ವರ್ಷಕ್ಕೆ ಕಾಲಿಟ್ಟಿದೆ, ಪ್ರಸ್ತುತ ಸಂಘಕ್ಕೆ ನಿವೇಶನ ಹಾಗೂ ಕಛೇರಿಯ ಅವಶ್ಯಕತೆ ಇದ್ದುಇದಕ್ಕಾಗಿ ಎಲ್ಲರ ಸಹಾಯ ಯಾಚಿಸಿದರು. ನಾವು ಹಿಂದಿನ ವರ್ಷಗಳಲ್ಲಿ ಆರೋಗ್ಯ,ಕಾನೂನು, ಆಪ್ತಸಲಹೆಗಳನ್ನು ನಮ್ಮ ಸದಸ್ಯರಿಗೆ ನೀಡುತ್ತಾ ಬಂದಿದ್ದು ಮುಂದೆಯೂ ಸಲಹೆ ಕೇಳಿ ಬಂದಲ್ಲಿ ಸದಾ ಸಿದ್ಧರಿದ್ದೇವೆ ಎಂದು ತಿಳಿಸಿದರು.

ಸಂಘದ ೭೨ ವರ್ಷ ತುಂಬಿದ ಸದಸ್ಯರಾದ ಕೃಷ್ಣ ಶ್ಯಾಮ್ ಬಿ.ಸಿ.ರೋಡು, ಜನಾರ್ಧನ ಸಾಲಿಯಾನ್ ವೀರಕಂಭ, ಧರಣಪ್ಪ ಮುಡಿಪು, ಜಿನ್ನಪ್ಪ ಮೂಲ್ಯ ವೀರಕಂಭ, ವಿಶ್ವನಾಥ ಸಾಲಿಯಾನ್ ಸೋರ್ನಾಡು, ನೀಲಪ್ಪ ಸಾಲಿಯಾನ್ ತುಂಬೆ, ಭೋಜ ಮೂಲ್ಯ ಪುಡಿಕಲಕೋಡಿ, ಅಣ್ಣಪ್ಪ ಮೂಲ್ಯ ಅಂಗರ ಗುಂಡಿ, ಭೋಜ ಸಾಲಿಯಾನ್ ಮೈರಾನ ಪಾದೆ, ಮೋಹನ ಸಾಲಿಯಾನ್ ಅರ್ಕಮೆ, ಡಿ ಚಂದಪ್ಪ ಮೂಲ್ಯ ಉಪ್ಪಿನಂಗಡಿ, ಕೃಷ್ಣಪ್ಪ ಕುಲಾಲ್ ಕುಪ್ಪಿಲ, ಶೇಷಪ್ಪ ಸಾಲಿಯಾನ್ ಕಲಾಯಿ ಅಮ್ಟಾಡಿ, ಸುಮಿತ್ರಾ ಆರ್ ಉದ್ಯಾವರ ಹೀಗೆ ಒಟ್ಟು ೧೪ ಹಿರಿಯ ಸದಸ್ಯರನ್ನು ವೇದಿಕೆಯಲ್ಲಿ ಶಾಲು ಸ್ಮರಣಿಕೆ, ಹಾರ, ಪೇಟ, ಫಲ ಪುಷ್ಪ ತಾಂಬೂಲ ನೀಡಿ ಸನ್ಮಾನಿಸಲಾಯಿತು.

 ಇವರ ವಿವರವನ್ನು ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ದಿನಕರ ಉದ್ಯಾವರ, ಶ್ರೀಮತಿ ರೋಹಿಣಿ, ಶ್ರೀ ಓಬಯ್ಯ ಮೂಲ್ಯ ಜತೆ ಕಾರ್ಯದರ್ಶಿ ಶ್ರೀನಿವಾಸ ವಾಚಿಸಿದರು.ಅಗಲಿದ ಸದಸ್ಯರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಗಲಿದ ಸದಸ್ಯರ ವಿವರವನ್ನು ರಾಮಮೂಲ್ಯ ಮರ್ದೊಳಿ ಇವರು ನೀಡಿದರು. ೨೦೨೫-೨೭ನೇ ಸಾಲಿಗೆ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಯನ್ನು ಚುನಾವಣಾಧಿಕಾರಿ, ಶ್ರೀ ದೇವದಾಸ್ ಮಾಸ್ಟರ್ ಕೊಡ್ಮಾಣ್ ನಡೆಸಿ ಕೊಟ್ಟರು. 

ಡಿ. ಚಂದಪ್ಪ ಮೂಲ್ಯ ಸನ್ಮಾನಿತರ ಪರವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಶಾಂಭವಿ ಸೋಮಯ್ಯ ಪ್ರಾರ್ಥನೆ ಮಾಡಿದರು. ಪ್ರಧಾನ ಕಾರ್ಯದರ್ಶಿ ಪದ್ಮನಾಭ ಎಂ ವರದಿ ವಾಚಿಸಿ ಧನ್ಯವಾದ ಅರ್ಪಿಸಿದರು ಖಜಾಂಚಿ ಸೋಮಪ್ಪ ಬಂಗೇರ ಲೆಕ್ಕ ಪತ್ರ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು. ಶ್ರೀಮತಿ ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು. 

ವಿಠಲ ಮೂಲ್ಯ ಜಕ್ರಿಬೆಟ್ಟು ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣಪ್ಪ ಬಡ್ಡಕಟ್ಟೆ ಸಹಕರಿಸಿದರು.

Leave a Comment