ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ (INTUC) ನೇತೃತ್ವದಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವ ಐತಿಹಾಸಿಕ 'ರಾಜೀವ್ ಗಾಂಧಿ ಜ್ಯೋತಿ ಯಾತ್ರೆ'ಯು ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿ ನಲ್ಲಿ ಅತ್ಯಂತ ಯಶಸ್ವಿಯಾಗಿ ಸಮಾರೋಪಗೊಂಡಿತು.
ಭಾರತದ ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿ ಅವರ 35 ನೇ ವರ್ಷದ ಸ್ಮರಣಾ ದಿನ ಹಾಗೂ ಮರಣ ವಾರ್ಷಿಕೋತ್ಸವದ ಅಂಗವಾಗಿ, ಅವರ ಹುತಾತ್ಮ ಸ್ಥಳದ ಮುಂದೆ ಜ್ಯೋತಿಯನ್ನು ಇರಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಅದ್ಧೂರಿ ಚಾಲನೆ ಮತ್ತು ಜ್ಯೋತಿ ಯಾತ್ರೆ ಸಾಗಿದ ಮಾರ್ಗ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮೇ 15, ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಈ ಜ್ಯೋತಿ ಯಾತ್ರೆಗೆ ಸಲೀಂ ಅಹಮದ್ ಮತ್ತು ಮಾಜಿ ಸಚಿವ ಎಚ್.ಎಂ. ರೇವಣ್ಣ ರವರ ಉಸ್ತುವಾರಿಯಲ್ಲಿ ಅದ್ಧೂರಿ ಚಾಲನೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಶಾಸಕರು ಮತ್ತು ಇತರ ಅನೇಕ ನಾಯಕರು ಉಪಸ್ಥಿತಿ ತೋರಿದ್ದರು
ಬೆಂಗಳೂರಿನಿಂದ ಹೊರಟ ಜ್ಯೋತಿ ಯಾತ್ರೆಯು ನೆಲಮಂಗಲ, ಕುಣಿಗಲ್, ಯಡಿಯೂರು, ಚನ್ನರಾಯಪಟ್ಟಣ, ಹಾಸನ, ಹೊಳೇನರಸೀಪುರ, ಕೆ.ಆರ್. ನಗರ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಮೂಲಕ ಸಾಗಿ ಬಳಿಕ ತಮಿಳುನಾಡಿನ ಸತ್ಯಮಂಗಲಂ, ಕೋಯಂಬತ್ತೂರು, ಅವಿನಾಶಿ, ಪೆರುಮನಲ್ಲೂರು, ಈರೋಡ್, ಭವಾನಿ, ಸೇಲಂ, ಅತ್ತೂರು, ಧರ್ಮಪುರಿ, ಕೃಷ್ಣಗಿರಿ, ತಿರುಪತ್ತೂರು, ಉತ್ತಂಗರಾಯ್, ಸಿಂಗಾರಪೇಟೆ, ಚೆಂಗಂ, ತಿರುವಣ್ಣಾಮಲೈ, ಜಿಂಜಿ, ತಿಂಡಿವನಂ ಮೂಲಕ ಪಾಂಡಿಚೇರಿಗೆ ಪ್ರವೇಶಿಸಿತು. ಅಲ್ಲಿಂದ ಮೇ 21ರಂದು ಬೆಳಿಗ್ಗೆ ತಮಿಳುನಾಡಿನ ಶ್ರೀಪೆರಂಬದೂರನ್ನು ತಲುಪಿ ಮುಕ್ತಾಯಗೊಂಡಿತು.
ಜ್ಯೋತಿ ಸ್ವೀಕಾರ ಮತ್ತು ಯಾತ್ರೆಯ ಉದ್ದೇಶ:
ಮೇ 21ರಂದು ಶ್ರೀಪೆರಂಬದೂರಿನಲ್ಲಿ ತಮಿಳುನಾಡು ಪ್ರದೇಶ ಕಾಂಗ್ರೆಸ್
ಸಮಿತಿಯ (TNCC) ಅಧ್ಯಕ್ಷ ಕೆ. ಸೆಲ್ವ ಪೆರುಂತಗೈಜಿ ಅವರು ಜ್ಯೋತಿಯನ್ನು ಅಧಿಕೃತವಾಗಿ ಸ್ವೀಕರಿಸಿದರು.
ಈ ಯಾತ್ರೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಅಧ್ಯಕ್ಷರು ಹಾಗೂ ಅಖಲ ಭಾರತ ರಾಜೀವ ಗಾಂಧೀ ಜ್ಯೋತಿ ಯಾತ್ರಾ ಸಮಿತಿಯ ಅಧ್ಯಕ್ಷ ಆರ್. ದೊರೈವೇಲು ಮತ್ತು ಭಾರತ ರಾಜೀವ ಗಾಂಧೀ ಜ್ಯೋತಿ ಯಾತ್ರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಬಗ್ಗು ಮೂಲೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಯಾತ್ರೆಯುದ್ದಕ್ಕೂ ಮಾರ್ಗಮಧ್ಯದಲ್ಲಿ ಅನೇಕ ರಸ್ತೆಬದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜೀವ್ ಗಾಂಧೀಜಿಯವರ ಸಂದೇಶ, ಜೀವನ ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಪ್ರಚಾರ ಮಾಡಲಾಯಿತು.
ರಾಷ್ಟ್ರೀಯ ಐಕ್ಯತೆ, ಏಕತೆಯನ್ನು ಬಲಪಡಿಸುವುದು, ಸಹೋದರತ್ವದ ಸಂದೇಶವನ್ನು ಸಾರುವುದು ಹಾಗೂ ದೇಶದ ಶತ್ರುಗಳ ವಿರುದ್ಧ ಹೋರಾಡಲು ಜನರಲ್ಲಿ ಜಾಗೃತಿ ಮೂಡಿಸಿ, ಧೈರ್ಯ ಮತ್ತು ಬದ್ಧತೆಯನ್ನು ಬೆಳೆಸುವುದು ಈ ಯಾತ್ರೆಯ ಮುಖ್ಯ ಧ್ಯೇಯವಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ.
ಈ ಐತಿಹಾಸಿಕ ಜ್ಯೋತಿ ಯಾತ್ರೆಯನ್ನು ಅಖಿಲ ಭಾರತ ಆರ್.ಜಿ.ಜೆ.ವೈ. ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಆರ್. ದೊರೈವೇಲು ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಇವರೊಂದಿಗೆ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಹಾಗೂ ಐಎನ್‌ಟಿಯುಸಿ ರಾಜ್ಯ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ವೆಂಕಟೇಶ್ ಅವರು ಪ್ರಮುಖವಾಗಿ ಭಾಗವಹಿಸಿ ಯಾತ್ರೆಯ ಯಶಸ್ಸಿಗೆ ಶ್ರಮಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಯಾತ್ರೆಯುದ್ದಕ್ಕೂ ಸಾಥ್ ನೀಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ರಾಜ್ಯ ಉಪಾಧ್ಯಕ್ಷ ಸಿದ್ದಿಕ್ ಸೂರ್ಯ ಸಹಿತ ಹಲವರನ್ನು ಗೌರವಿಸಲಾಯಿತು.















