ಗಣೇಶ್ ಕಾಮತ್ ಮೂಡಬಿದಿರೆ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನೆಲದಲ್ಲಿ ನಡೆದ ಹೋರಾಟವೂ ಮಹತ್ವದ್ದು. ರಾಷ್ಟ್ರಾಭಿಮಾನ ಅರಳಿಸಿ ದಾಸ್ಯದ ವಿರುದ್ಧ ದೇಶಾಭಿಮಾನಿ ಜನತೆ ಪುಟಿದೇಳುವಲ್ಲಿ ದ.ಕ ಜಿಲ್ಲೆಯ ಕಾರ್ನಾಡು ಸದಾಶಿವ ರಾವ್ ಮೊದಲಾದ ನಾಯಕರುಗಳ ನೇತೃತ್ವ ಪ್ರಮುಖವಾದದ್ದು. ದ.ಕ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯದ ಹೋರಾಟದಲ್ಲಿ ಜಿಲ್ಲೆಗೆ ತಮ್ಮ ಮೂರು ಭೇಟಿಗಳ ಪೈಕಿ ಎರಡು ಬಾರಿ ಗಾಂಧೀಜಿಯವರು ಮಂಗಳೂರಿನ ಕೆನರಾ ಹೈಸ್ಕೂಲ್ಗೆ ಭೇಟಿ ನೀಡಿದ್ದರು ಎನ್ನುವುದು ವಿಶೇಷ.

ಗಾಂಧೀಜಿಯವರ ದ.ಕ ಜಿಲ್ಲಾ ಭೇಟಿಯಲ್ಲಿ ಕೆನರಾ ಹೈಸ್ಕೂಲ್ಗೆ ಸಂದರ್ಶನ, ಅಲ್ಲಿ ನಡೆದ ಘಟನೆಗಳೂ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಗಮನಾರ್ಹ ಮಾತ್ರವಲ್ಲ ಅವಿಸ್ಮರಣೀಯವೆನಿಸಿವೆ.ಬ್ರಿಟೀಷ್ ಅವಧಿಯ ದಾಸ್ಯ,ದೌರ್ಜನ್ಯದಿಂದ ರೋಸಿ ಹೋಗಿ ಜಿಲ್ಲೆಯ ಜನತೆಗೆ ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡುವ ಕನಸು ಕಂಡವರು ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದ ಅಮ್ಮೆಂಬಳ ಸುಬ್ಬರಾವ್ ಪೈ.

ಮುಂದೆ 1981ರಲ್ಲಿ ಕೆನರಾ ಹೈಸ್ಕೂಲ್, ಮುಷ್ಠಿ ಅಕ್ಕಿ ಸಂಗ್ರಹಿಸಿ ಆ ಮೂಲಕ ಮಹಿಳಾ ಶಿಕ್ಷಣಕ್ಕಾಗಿ ಆರಂಭಿಸಿದ ಶಾಲೆ, 1906ರಲ್ಲಿ ಆರಂಭಿಸಿದ ಕೆನರಾ ಬ್ಯಾಂಕ್ ಇಂದು ಜಾಗತಿಕ ಮನ್ನಣೆ ಪಡೆದಿರುವುದು ಗಮನಾರ್ಹವೇ. ಬ್ರಿಟೀಷ್ ಅಧಿಕಾರಿಗಳು ರಸ್ತೆಯಲ್ಲಿ ಠೀವಿಯ ದರ್ಬಾರಿನಿಂದ ಸಾಗಿ ಬಂದರೆ ರಸ್ತೆಗೋಡಿ ಬಂದು ಕುತೂಹಲದಿಂದ ಅವರನ್ನು ಕಣ್ತುಂಬಿಕೊಳ್ಳುತ್ತಿದ್ದವರ ಮಧ್ಯೆ ತಾನು ಕೆಲಸ ಮಾಡುವಲ್ಲಿಂದ ಕಣ್ಣೆತ್ತಿ ನೋಡಿದರೂ ಕಾಣಬಹುದಾದ ಇಂತಹ ಸಂದರ್ಭಗಳಲ್ಲಿ ಸುಬ್ಬರಾವ್ ಪೈ ತಿರುಗಿ ಕುಳಿತು ತನ್ನ ಕೆಲಸದಲ್ಲಿ ತೊಡಗಿಕೊಳ್ಳುವ ಮಟ್ಟಕ್ಕೆ ಬ್ರಿಟೀಷರ ವಿರುದ್ಧ ಅಸಹನೆ ಹೊಂದಿದ್ದರು.

ಶೈಕ್ಷಣಿಕ ಸ್ವಾತಂತ್ರ್ಯ ನೀಡಬೇಕೆಂಬ ಅವರ ಕನಸು ಕೆನರಾ ಹೈಸ್ಕೂಲ್ ಮೂಲಕ ಸಾಕಾರಗೊಂಡಿತು ಎನ್ನುವುದಕ್ಕೆ ಇಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಸಾಧಕರಾಗಿ ಗಮನ ಸೆಳೆದದ್ದು. ದೇಶದ ಸಂವಿಧಾನ ಕರಡು ರಚನಾ ಸಮಿತಿಯಲ್ಲಿದ್ದ ಬೆನಗಲ್ ನರಸಿಂಗ ರಾವ್, ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಮೊದಲಾದವರು ಕೆನರಾ ಶಿಕ್ಷಣ ಸಂಸ್ಥೆಯ ಕೊಡುಗೆಗಳೇ. ಸುಬ್ಬರಾವ್ ಪೈ ಅವರ ಕೆನರಾ ಸಂಸ್ಥೆಗೂ ಮುಂದೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಎರಡೆರಡು ಬಾರಿ ಭೇಟಿ ನೀಡಿದ್ದು, ರಾಷ್ಟ್ರಮಟ್ಟದಲ್ಲಿ ಹೆಸರಾದ ಶಾಲಾ ಮ್ಯೂಸಿಯಂಗೂ ತಮ್ಮ ಹೆಸರಿಡಲು ಗಾಂಧೀಜಿ ಸಮ್ಮತಿಸಿದ್ದು ಎಲ್ಲವೂ ಸ್ಮರಣೀಯ.

ದ.ಕ ಜಿಲ್ಲೆಗೆ ಭೇಟಿ ನೀಡಬೇಕೆಂದು ಒತ್ತಾಯಿಸಿ ಕಾರ್ನಾಡು ಸದಾಶಿವ ರಾಯರು ಬರೆದಿದ್ದ ಪತ್ರಕ್ಕೆ ಸ್ಪಂದಿಸಿ ಗಾಂಧೀಜಿ 19.08. 1920ರಂದು ಮಂಗಳೂರಿಗೆ ಅಸಹಕಾರ ಚಳುವಳಿಯ ನೇತಾರರಾಗಿ ಮೊದಲ ಭೇಟಿ ನೀಡಿದ್ದರು. ಅಂದಿನ ಅವರ ಭಾಷಣದಿಂದ ಪ್ರಭಾವಿತರಾದ ಅನೇಕ ಮಂದಿ ಗಾಂಧೀಜಿಯವರ ಹೋರಾಟಕ್ಕೆ ನಿಧಿ ಮಹಿಳೆಯರು ಚಿನ್ನಾಭರಣ ನೀಡಿದ್ದರು.

ದಿನಾಂಕ 26.10.1927 ರಂದು ಮಂಗಳೂರಿಗೆ ತಮ್ಮ ಎರಡನೇ ಭೇಟೆಯಲ್ಲಿ ಗಾಂಧೀಜಿ ಜಿಲ್ಲೆಯಲ್ಲಿ ಸರಣಿ ಕಾರ್ಯಕ್ರಮಗಳ ಉದ್ದೇಶ ಇಟ್ಟುಕೊಂಡಿದ್ದರೂ ವೈಸರಾಯ್ ಅವರಿಂಧ ತುರ್ತು ಸಂದೇಶ ಬಂದ ಹಿನ್ನೆಲೆಯಲ್ಲಿ ಮಂಗಳೂರಿಗಷ್ಟೇ ಸೀಮಿತವಾಗಿ ಸುತ್ತಾಡಿ ಮರಳಿದರು. ಶಿವರಾಮ ಕಾರಂತರೂ ಹೋರಾಟಕ್ಕೆ ಇಳಿದ ಸಂದರ್ಭವದು.

ಸಂಜೆ ಕೇಂದ್ರ ಮೈದಾನದಲ್ಲಿ ಸಭೆ ಜರಗಿತ್ತು. ಮರುದಿನ ಹಡಗಿನ ಮೂಲಕ ಮುಂಬೈಗೆ ತೆರಳುವ ಮೊದಲು ಅವರು ಕೆನರಾ ಹೈಸ್ಕೂಲ್ಗೆ ಭೇಟಿ ನೀಡಿ ಶ್ರೀ ಭುವನೇಂದ್ರ ಸಭಾಭವನದಲ್ಲಿ ದೀನಬಂಧು ಚಿತ್ತರಂಜನ ದಾಸ, ಬಾಲಗಂಗಾಧರ ತಿಲಕರ ಭಾವಚಿತ್ರ ಅನಾವರಣಗೊಳಿಸಿ ಈ ಚಿತ್ರಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲಿ, ಅವರಂತೆ ನೀವೂ ಸೇವಕರಾಗಲು ಸಂಕಲ್ಪ ಮಾಡಿ, ಮಾನವರೆಲ್ಲರಿಗೂ ಸ್ವಾತಂತ್ರ್ಯ ವಿರಬೇಕು ಎನ್ನುವುದನ್ನು ತಿಳಿಯಿರಿ ಎಂದು ನುಡಿದಿದ್ದರು.

ಅಸ್ಪೃಶ್ಯತಾ ನಿವಾರಣೆಗಾಗಿ ಹರಿಜನ ಯಾತ್ರೆಯ ಸಂದರ್ಭದಲ್ಲಿ 24.02.1934 ರಂದು ಮಂಗಳೂರಿನ 3ನೇ ಭೇಟಿಯಲ್ಲಿ ಮತ್ತೆ ಎರಡನೇ ಬಾರಿಗೆ ಮಂಗಳೂರಿನ ಕೆನರಾ ಹೈಸ್ಕೂಲಿಗೆ ಆಗಮಿಸಿ ಶ್ರೀ ಕೃಷ್ಣ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದು ವಿಶೇಷ. ಈ ಸಂದರ್ಭ ಅವರು ಬಳಸಿದ ಟಾಪಿಯನ್ನು ಕೂಡಲೇ ಹರಾಜು ಹಾಕಲಾಗಿದ್ದು ಅದನ್ನು ಶಾಲಾ ಹಳೆ ವಿದ್ಯಾರ್ಥಿ ಯೋರ್ವ ಖರೀದಿಸಿ ಅದೀಗ ಮರಳಿ ಶಾಲಾ ಮ್ಯೂಸಿಯಂನಲ್ಲಿ ಸ್ಮರಣಿಕೆಯಾಗಿ ಉಳಿದುಕೊಂಡಿದೆ.

ಅಂದ ಹಾಗೆ 1934ರಲ್ಲಿ ಗಾಂಧೀಜಿಯವರ ಹೋರಾಟಕ್ಕೆ ಚಿನ್ನಾಭರಣ ನೀಡುವವರಿಗಾಗಿ ನೆಲದ ಮೇಲೆ ಹಾಕಿದ್ದ ದೊಡ್ಡ ಬಟ್ಟೆಗೆ ಹನ್ನೊಂದರ ಹರೆಯದ ಬಾಲಕಿಯೊರ್ವಳು ಕೈಗಳ ಬಳೆ, ಕತ್ತಿನ ಹಾರ, ಮೂಗುತಿ, ಬೆಂಡೋಲೆ ಹಾಕಿದ್ದು ನಂತರ ಎಂದೂ ಆಕೆ ಆಭರಣ ಧರಿಸಲಿಲ್ಲ. ನಿನ್ನನ್ನು ಮದುವೆಯಾಗುವ ಗಂಡು ಚಿನ್ನ ಕೇಳಿದರೆ ಏನು ಮಾಡುತ್ತಿ? ಎಂದು ಆಗ ಗಾಂಧೀಜಿ ಕೇಳಿದ್ದ ಪ್ರಶ್ನೆಗೆ ಆಕೆ ನನ್ನನ್ನೇ ಚಿನ್ನವೆಂದು ಸ್ವೀಕರಿಸುವ ಗಂಡನ್ನು ಮದುವೆಯಾಗುತ್ತೇನೆ ಎಂದಿದ್ದರಂತೆ. ಆಕೆ ಕೆನರಾ ಹೈಸ್ಕೂಲ್ನ ಮುಖ್ಯ ಶಿಕ್ಷಕರಾಗಿದ್ದ ಜೆ. ವಾಸುದೇವ ಪೈ ಅವರ ಪುತ್ರಿ ವಿನತಾ ರಾವ್. ಮುಂದೆ ಆಕೆಯೂ ಕೆನರಾ ಹೈಸ್ಕೂಲ್ನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.

ಅತ್ಯಮೂಲ್ಯ ವಸ್ತು ಸಂಗ್ರಹದ ಮೂಲಕ ಅಂದಿನ ಕಾಲಕ್ಕೆ ದೇಶಕ್ಕೇ ಮಾದರಿಯೆನಿಸಿದ್ದ ಶಾಲಾ ಮ್ಯೂಸಿಯಂ ಹೊಂದಿದ್ದ ಕೆನರಾ ಹೈಸ್ಕೂಲ್ ಈ ಮ್ಯೂಸಿಯಂಗೆ ಗಾಂಧೀಜಿಯವರ ಹೆಸರನ್ನಿಡಲು ಅವರ ಅನುಮತಿ ಕೇಳಿದಾಗ ಗಾಂಧೀಜಿ ಸಮ್ಮತಿ ನೀಡಿ 1939ರಲ್ಲಿ ಗಾಂಧೀ ಮ್ಯೂಸಿಯಂ ಎಂದು ನಾಮಕರಣಗೊಂಡದ್ದು ವಿಶೇಷ. 1942ರ ಅವಧಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ದಿನಗಳಲ್ಲಿ ಗಾಂಧೀ ಟೋಪಿ ಧರಿಸಿ ತರಗತಿಗೆ ಹಾಜರಾಗುತ್ತಿದ್ದ ಮಕ್ಕಳು, ತರಗತಿಗಳಿಗೆ ಗೈರು ಹಾಜರಾಗುತ್ತಿದ್ದ ಮಕ್ಕಳು ಹೀಗೆ ಶಾಲಾ ಇತಿಹಾಸದ ಪುಟಗಳಲ್ಲಿ ಸ್ವಾಭಿಮಾನದ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳ ಗುರುತುಗಳು ಅಲ್ಲಲ್ಲಿ ಕಾಣಸಿಗುತ್ತವೆ.

Leave a Comment