ಬಂಟ್ವಾಳ :ಯಕ್ಷಕಲಾ ಪೊಳಲಿ ಎಂಬ ಸಂಸ್ಥೆಯು ಕಳೆದ 30ವರುಷಗಳ ಹಿಂದೆ ಯಕ್ಷಗಾನೀಯ ಉದ್ದೇಶಗಳಿಗಾಗಿ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಾರಂಭಗೊಂಡು ಯಕ್ಷಗಾನ ಕ್ಷೇತ್ರದ ಕಲಾವಿದರಿಗೆ, ಕಲಾ ಪೋಷಕರಿಗೆ ಗೌರವರ್ಪಣೆ, ಸಂಸ್ಮರಣೆ, ಬಯಲಾಟ,150ಕ್ಕೂ ಮಿಕ್ಕಿ ಯಕ್ಷಗಾನ ಕಲಾವಿದರ ಸನ್ಮಾನ, ಯಕ್ಷಗಾನ ಸಂಘಗಳಿಗೆ ಯಕ್ಷಕಲಾ ಗೌರವದ ಸೇವೆ ಮಾಡುತ್ತ ಇದೀಗ 30ನೇ ವರ್ಷ ಪೂರೈಸುವ ಸಂದರ್ಭದಲ್ಲಿ "ತಿಂಶತ್ ಸಂಭ್ರಮ" ಪೊಳಲಿ ಯಕ್ಷೋತ್ಸವ-2025 ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಸೆ.27ರಂದು ಶನಿವಾರ ಬೆಳಿಗೆ ಘಂಟೆ 8.30ರಿಂದ ರಾತ್ರಿ ಘಂಟೆ 10.30 ರವರೆಗೆ ನಡೆಯಲಿದ್ದು ಸಭಾ ಸಮಾರಂಭದಲ್ಲಿ ರಾಮಕೃಷ್ಣ ತಪೋವನ ಪೊಳಲಿಯ ವಿವೇಕಾ ಚೈತನ್ಯಾನಂದ ಸ್ವಾಮೀಜಿಯವರು ಆಶೀರ್ವಚನದೊಂದಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಯಕ್ಷ ಪೊಳಲಿ ಸಂಚಾಲಕ ವೆಂಕಟೇಶ ನಾವಡ ಪೊಳಲಿ ಹೇಳಿದರು.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಸೆ. 20ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಿಗೆ 8.30 ರಿಂದ ಸಂಜೆ 5.30 ರವರೆಗೆ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಜ್ವಾಲಾ ಪ್ರತಾಪ, ಬಬ್ರುವಾಹನ ಕಾಳಗ, ದಮಯಂತಿ ಪುನ: ಸ್ವಯಂವರ ಎಂಬ ಯಕ್ಷಗಾನ ಬಯಲಾಟ ಸಂಜೆ 7.00ರಿಂದ ರಾತ್ರಿ 10.30ರವರೆಗೆ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ (ರಿ) ಸಿದ್ದಾಪುರ ಇವರಿಂದ ಮಧುರಾ ಮಹೀಂದ್ರ ಎಂಬ ಬಡಗುತಿಟ್ಟಿನ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಹೇಳಿದರು.
ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆ ಮಾತನಾಡಿ, ಸಂಜೆ 5.30ರಿಂದ 7 ಘಂಟೆಯವರೆಗೆ ಜರುಗುವ ಸಭಾ ಪರ್ವದಲ್ಲಿ 13
ಮಂದಿ ಹಿರಿಯ ಕಲಾವಿದರಿಗೆ ಗೌರವ ನಿಧಿಯೊಂದಿಗೆ ಸನ್ಮಾನ. 2 ಯಕ್ಷಗಾನ ಸಂಘಗಳಿಗೆ ಪೊಳಲಿ ಯಕ್ಷಕಲಾ ಗೌರವ, ಪ್ರಸಿದ್ದ ಹೃದ್ರೋಗ ತಜ್ಞ ಹಾಗೂ ಯಕ್ಷಕಲಾ ಪೋಷಕ ಡಾ! ಪದ್ಮನಾಭ ಕಾಮತ್ ಇವರಿಗೆ ಪೊಳಲಿ ಯಕ್ಕೋತ್ಸವ ಪ್ರಶಸ್ತಿ, ಕಳೆದ 30 ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ನಿರಂತರ ಕಲಾ ಸೇವೆ ಮಾಡುತ್ತಿರುವ 5 ಮಂದಿ ಕಲಾವಿದರಿಗೆ ಗೌರವಾರ್ಪಣೆ ಹಾಗೂ ಸ್ಥಳೀಯ ಕಲಾ ಪೋಷಕರಾದ ಇಬ್ಬರು ಸಂಘಟಕರಿಗೆ ಯಕ್ಷ ಪೋಷಕ ಗೌರವ ಮತ್ತು ಕೀರ್ತಿಶೇಷರಾದ 8 ಮಂದಿ ಹಿರಿಯ ಕಲಾವಿದರ ಸಂಸ್ಮರಣೆ ಜರಗಲಿರುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲೋಕೇಶ್ ಭರಣಿ, ಮೋಹನ್ ಬಿಲ್ವಪತ್ರೆ ಉಪಸ್ಥಿತರಿದ್ದರು.















