ಬಂಟ್ವಾಳ :ಸದಾಶಿವ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆಯ "ಎಡುವೆಂಚರ್" ಶಿಕ್ಷಣ ಸಂಸ್ಥೆಯ ಎಡು -ಕ್ವೆಸ್ಟ್ ಶೀರ್ಷಿಕೆಯಡಿಯಲ್ಲಿ ನಡೆಸಲಾಗುವ ವಿದ್ಯಾರ್ಥಿ ವೇತನದ ಪರೀಕ್ಷೆಯ 2026 ರ ಸಾಲಿನಲ್ಲಿ ಅತ್ಯುತ್ತಮ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆಯಿತು.
ದಕ್ಷಿಣ ಕನ್ನಡ, ಹಾಸನ, ಚಿಕ್ಕಮಂಗಳೂರು, ಮಂಡ್ಯ ಹಾಗೂ ಶಿವಮೊಗ್ಗ ಸೇರಿದಂತೆ ಐದು ಜಿಲ್ಲೆಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಮೊದಲ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಇದರ ಸ್ಥಾಪಕರಾದ ಡಾ. ಮಂಜುನಾಥ್ ಭಂಡಾರಿ, ವಿದ್ಯಾರ್ಥಿಗಳನ್ನು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ನೈಜ ಪ್ರತಿಭೆಯ ಅನಾವರಣಕ್ಕೆ ಮುಕ್ತವಾದ ಅವಕಾಶಗಳನ್ನು ಒದಗಿಸಬೇಕು, ಪೋಷಕರು ತಮ್ಮ ಆಲೋಚನೆಗಳನ್ನು ಮಕ್ಕಳ ಮೇಲೆ ಹೇರಬಾರದು ಎಂದು ಕಿವಿಮಾತು ಹೇಳಿದರು.
ಇನ್ನೋರ್ವ ಅತಿಥಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಇದರ ಟ್ರಸ್ಟಿ ಜಗನ್ನಾಥ್ ಚೌಟ ಮಾತನಾಡುತ್ತಾ,, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಹಂತ ಅತ್ಯಂತ ನಿರ್ಣಾಯಕವಾಗಿದೆ. ವಿದ್ಯಾರ್ಥಿಗಳು ಕಠಿಣ ಶ್ರಮ ಹಾಗೂ ಶ್ರದ್ಧೆಯಿಂದ ತಮ್ಮ ಗುರಿಯನ್ನು ಸಾಧಿಸುವತ್ತ ಗಮನ ಹರಿಸಬೇಕು ಎಂದರು.
ಸದಾಶಿವ ಶಿಕ್ಷಣ ಪ್ರತಿಷ್ಠಾನದದ ಅಧ್ಯಕ್ಷ ಅಮೃತ್ ರೈ ಮಾತನಾಡಿ, ತಮ್ಮ ವಿದ್ಯಾ ಸಂಸ್ಥೆಯಲ್ಲಿ ನೀಡಲಾಗುವ ಶಿಕ್ಷಣ ಕ್ರಮದ ಬಗ್ಗೆ ವಿವರಿಸಿ, ಅತ್ಯಾಧುನಿಕ ಸೌಕರ್ಯಗಳೊಂದಿಗೆ ಅತ್ಯಂತ ಅನುಭವಿ ನುರಿತ ಉಪನ್ಯಾಸಕರ ತಂಡದ ಮೂಲಕ ವಿದ್ಯಾರ್ಥಿಸ್ನೇಹಿ ವಾತಾವರಣದಲ್ಲಿ ಬೋಧನಾಕ್ರಮ ನಡೆಯಲಿದೆ ಎಂದರು.
ವಿದ್ಯಾರ್ಥಿಗಳಾದ
ಹಾಸನ ಜಿಲ್ಲೆಗೆ ನಿರೂಪ್ ಬಾಬು ಯು. ಕೆ ಹಾಗೂ ಸುಜನ್ ಎಂ, ದಕ್ಷಿಣ ಕನ್ನಡ ಜಿಲ್ಲೆಗೆ ಮೇಘಾ ಜಿ ಪೂಜಾರಿ ಹಾಗೂ ವರ್ಷಾ ನಾಗರಾಜ್ ಚಾಟರ್, ಚಿಕ್ಕ ಮಂಗಳೂರು ಜಿಲ್ಲೆಗೆ ಸ್ಕಂದ ಸಿದ್ದಾರ್ಥ್ ಹಾಗೂ ಝಯಿಮಾ ದಹಿಯಾ,ಶಿವಮೊಗ್ಗ ಜಿಲ್ಲೆಗೆ ಸಾಯಿಕಿರಣ್ ಹಾಗೂ ಹರಿ ಕಿರಣ್ ಎ.ಕೆ, ಮಂಡ್ಯ ಜಿಲ್ಲೆಗೆ ಶ್ರೇಯಾ.ಆರ್ ಹಾಗೂ
ಮಿಥುನ್ ಎಸ್ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಪಡೆದವರಿಗೆ ಒಂದು ಲಕ್ಷ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಐವತ್ತು ಸಾವಿರ ರೂ. ಗಳ ನಗದು ಬಹುಮಾನ ಸೇರಿದಂತೆ ಏಳೂವರೆ ಲಕ್ಷ ನಗದು ಬಹುಮಾನಗಳನ್ನು ಸದಾಶಿವ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಅಮೃತ್ ರೈ ಯವರು ವಿತರಿಸಿದರು.
ಸದಾಶಿವ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ ಸ್ವಾಗತಿಸಿದರು. ಕೋಶಾಧಿಕಾರಿ ಅಶ್ವಥ್ ರೈ, ಟ್ರಸ್ಟಿಗಳಾದ ಸಮತಾ ಕಿಶೋರ್ ಹಾಗೂ ದೀಪಿಕಾ ಸಂದೇಶ್ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ವಾಣಿಜ್ಯ ವಿಭಾಗ ಉಪನ್ಯಾಸಕಿ ಕೀರ್ತನಾ ರಾವ್ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಮಹೇಶ್ ಕೆ. ಎನ್ ಪುತ್ತೂರು ಧನ್ಯವಾದವಿತ್ತು, ಕನ್ನಡ ಉಪನ್ಯಾಸಕ ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.















