ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶನ್ ಇಂಡಿಯಾ @ 2047 ವಿಶೇಷ ಉಪನ್ಯಾಸ. "ವಿಕಸಿತ ಭಾರತ" ರಾಷ್ಟ್ರದ ಕನಸನ್ನು ನನಸಾಗಿಸುವ ಜವಾಬ್ದಾರಿ ನಮ್ಮೆಲ್ಲರದ್ದು: ಡಾ. ಬಿ.ಇ. ರಂಗಸ್ವಾಮಿ.

Coastal Bulletin
ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶನ್ ಇಂಡಿಯಾ @ 2047 ವಿಶೇಷ ಉಪನ್ಯಾಸ. "ವಿಕಸಿತ ಭಾರತ" ರಾಷ್ಟ್ರದ ಕನಸನ್ನು ನನಸಾಗಿಸುವ ಜವಾಬ್ದಾರಿ ನಮ್ಮೆಲ್ಲರದ್ದು: ಡಾ. ಬಿ.ಇ. ರಂಗಸ್ವಾಮಿ.

ಬಂಟ್ವಾಳ: ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಬೆಳೆಯುತ್ತಿರುವ ನಮ್ಮ ಭಾರತ 2047ರ ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ಆತ್ಮ ನಿರ್ಭರ ವಿಕಸಿತ ಭಾರತವಾಗಿ ಜಾಗತಿಕ ಮನ್ನಣೆಗೆ ಪಾತ್ರವಾಗಬೇಕೆನ್ನುವುದು ದೇಶದ ಕನಸು. ನಾವೀಗ ಅಭಿವೃದ್ಧಿ ಹೊಂದುತ್ತಿರುವ ಎನ್ನುವ ದೀರ್ಘಕಾಲದ ಹಣೆಪಟ್ಟಿಯಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳಗಬೇಕು. ಬಹಳಷ್ಟು ಬೆಳೆದಿರುವ ದೇಶದಲ್ಲಿ ಇನ್ನೊಂದಿಷ್ಟು ಸಾಧನೆಯಿಂದ ವಿಕಸಿತ ಭಾರತದ ಕನಸು ನನಸಾಗಲಿದೆ. ಅದಕ್ಕಾಗಿ ಸರಕಾರಗಳ ಜತೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಬಿ.ಇ. ರಂಗಸ್ವಾಮಿ ಹೇಳಿದರು. ಅವರು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಸೋಮವಾರ ನಡೆದ ವಿಶನ್ ಇಂಡಿಯಾ @ 2047 ಕುರಿತು ವಿಶೇಷ ಉಪನ್ಯಾಸ ನೀಡಿದರು.

ಶಕ್ತಿ, ಸಾರಿಗೆ, ಸಂವಹನ, ಕೃಷಿ, ಆರೋಗ್ಯ ಶಿಕ್ಷಣ, ಇ ಆಡಳಿತ, ಇ- ವಾಣಿಜ್ಯ,ಕಂಪ್ಯೂಟಿಂಗ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಾವು ಇನ್ನಷ್ಟು ಉನ್ನತಿ ಕಂಡುಕೊಳ್ಳಬೇಕಾಗಿದೆ. ತಜ್ಞರು, ಸಂಪನ್ಮೂಲ, ತರಬೇತುದಾರರು, ತಂತ್ರಜ್ಞಾನರಂಗದಲ್ಲಿ ಅಭಿವೃದ್ಧಿಯೊಂದಿಗೆ ಸಾಧನೆ ಮಾಡಬೇಕಾಗಿದೆ. ಹ್ಯಾಂಡ್ ಸೆಟ್ ನಿಂದ ಸ್ಮಾರ್ಟ್ ಫೋನ್ ಮಟ್ಟಕ್ಕೆ ಬೆಳೆದಿರುವ ನಮ್ಮ ತಾಂತ್ರಿಕ ಜೌನತ್ಯ, ಅನಾರೋಗ್ಯದ ಸಂಕಷ್ಟದ ದಿನಗಳಿಂದ ಕೋವಿಡ್ ನಿರ್ವಹಣೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಂಡ ಸಾಧನೆ, ವಿಶ್ವಕ್ಕೇ ಕೋವಿಡ್ ಲಸಿಕೆ ನೀಡಿದ ಹಿರಿಮೆ ನಮ್ಮದಾಗಿದೆ. ಅಭಿವೃದ್ಧಿಯ ವೇಗದಲ್ಲಿ ಸರಕಾರದ ಜತೆ ನಾವೆಲ್ಲರೂ ಹೆಜ್ಜೆ ಹಾಕಿ ದೇಶದ ಕನಸನನ್ನು

ನನಸಾಗಿಸಲು ಶಕ್ತಿ ತುಂಬುವ ಅಗತ್ಯವಿದೆ ಎಂದವರು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ, ಕಾಲೇಜಿನ ಸಂಚಾಲಕ ಎಂ. ರಂಗನಾಥ್ ಭಟ್ ಮಾತನಾಡಿ ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ತಾಂತ್ರಿಕ ವಿದ್ಯಾರ್ಥಿಗಳ ಸಹಿತ ಯುವ ಜನತೆಯ ಜವಾಬ್ದಾರಿ ಹೆಚ್ಚಿದ್ದು ಈ ಸವಾಲನ್ನು ಅರ್ಥಪೂರ್ಣವಾಗಿ ಸಾಧಿಸುವಲ್ಲಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್. ಆರ್. ನಾಗೇಶ್ ಸ್ವಾಗತಿಸಿದರು. ಸಿ.ಎಸ್.ಬಿ.ಎಸ್. ವಿಭಾಗ ಮುಖ್ಯಸ್ಥ ಡಾ. ಹೆಚ್. ಎಂ.ಟಿ. ಗಡಿಯಾರ್ ಅತಿಥಿಯವರನ್ನು ಪರಿಚಯಿಸಿದರು. ಸಹಪ್ರಾಧ್ಯಾಪಕಿ ಕ್ಯಾರಲ್ ಡಿ.ಮೆಲ್ಲೋ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Comment