ಬಂಟ್ವಾಳ :ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಕೇವಲ ಇಬ್ಬರು ಮಾತ್ರ ಕಾಯಂ ಸಿಬ್ಬಂದಿಗಳಿದ್ದು, 6 ಮಂದಿಯನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಳಿಸಿದ್ದೆವು. ಈ ಬಗ್ಗೆ ರಾಜಕೀಯ ಪ್ರೇರಿತವಾಗಿ ಅಕ್ರಮ ನೇಮಕಾತಿ ಮತ್ತು ಮೃತರ ಹೆಸರಿನಲ್ಲಿ ಮತ ಗಳಿಸಿ ಗೆದ್ದಿರುವುದಾಗಿ ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದರು. ಆದರೆ ಈ ಬಗ್ಗೆ ಅವರು ನ್ಯಾಯಾಲಯಕ್ಕೆ ಏಕೆ ಅಪೀಲು ಮಾಡಿಲ್ಲ...? ಎಂದು ಅರುಣ್ ರೋಶನ್ ಡಿಸೋಜ ಪ್ರಶ್ನಿಸಿದರು. ಜಿಲ್ಲಾ ಸಹಕಾರಿ ನಿಬಂಧಕರ ಮೂಲಕ ರಾಜಕೀಯ ಒತ್ತಡ ಹೇರಿ ಎಲ್ಲಾ ನಿರ್ದೇಶಕರನ್ನು ಅನರ್ಹಗೊಳಿಸಿದ್ದಾರೆ ಎಂದು ಅಧ್ಯಕ್ಷ ವಕೀಲ ಅರುಣ್ ರೋಶನ್ ಡಿಸೋಜ ಹೇಳಿದರು.
ಅವರು ಸೆ. 18ರಂದು ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಈ ಆದೇಶದ ವಿರುದ್ಧ ಜಂಟಿ ನಿಬಂಧಕರಿಗೆ ಮೇಲ್ಮನವಿ ಸಲ್ಲಿಸಿ ತನಿಖೆ ನಡುವೆಯೇ ಅನರ್ಹತೆ ಅಮಾನತಿನಲ್ಲಿಟ್ಟು ವಿಚಾರಣೆ ನಡೆಸಲು ಹೈಕೋರ್ಟ್ ಆದೇಶಿಸಿತ್ತು. ಪ್ರಸಕ್ತ ಆಡಳಿತ ಮಂಡಳಿ ಅಧಿಕಾರಾವಧಿಯೂ ಮುಗಿದ ಹಿನ್ನೆಲೆಯಲ್ಲಿ ಪರಿಷ್ಕೃತ ಮತದಾರರ ಪಟ್ಟಿ ಸಿದ್ಧಪಡಿಸಿ ಚುನಾವಣೆ ನಡೆಸಲು ಆಡಳಿತಾಧಿಕಾರಿಗೆ ಆದೇಶಿಸಿದೆ. ಇನ್ನೊಂದೆಡೆ ಸುಸ್ತಿದಾರರಿಗೆ ನೋಟೀಸು ನೀಡಿದ್ದ ಬ್ಯಾಂಕಿನ ಪ್ರಭಾರ ಮೆನೇಜರ್ ಪದ್ಮನಾಭ ಅವರನ್ನು ಕೂಡಾ ಅಮಾನತುಗೊಳಿಸಿ ಬಳಿಕ ಚಿಕ್ಕಮಗಳೂರಿಗೆ ವರ್ಗಾವಣೆಗೊಳಿಸಿದ್ದಾರೆ. ಜಿಲ್ಲಾ ಸಹಕಾರಿ ನಿಬಂಧಕರು ಕಾಯ್ದೆ 1959 ಕಲಂ 64 ರ ಶಾಸನಬದ್ಧ ವಿಚಾರಣಾ ವರದಿಯಲ್ಲಿ ಯಾವುದೇ ಆರೋಪ ಸಾಬೀತಾಗಿಲ್ಲ ಎಂದಿದ್ದಾರೆ. ಆದರೆ ಇದೇ ಕಾಯ್ದೆಯಡಿ ತನಿಖೆ ನಡೆದು ಆರೋಪ ಸಾಬೀತುಗೊಂಡ ಕಾಂಗ್ರೆಸ್ ಆಡಳಿತ ಹೊಂದಿರುವ ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮಾತ್ರ ಯಾವುದೇ ನಿರ್ದೇಶಕರನ್ನು ಅಮಾನತುಗೊಳಿಸಿಲ್ಲ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು. ನಮಗೆ ಚುನಾವಣೆಗೆ ಸ್ಪರ್ಧಿಸದಂತೆ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದರು.ಸಹಕಾರಿ ನಿಬಂಧಕರು ತಕ್ಷಣ ಪರಿಷ್ಕೃತ ಆರ್ಹ ಮತದಾರರ ಪಟ್ಟಿಯನ್ನು ತಯಾರಿಸಿ ಚುನಾವಣೆ ನಡೆಸಲು ಮಂದಾಗಬೇಕು ಎಂದು ಅವರು ಈ ಮೂಲಕ ಒತ್ತಾಯಿಸಿದ್ದಾರು.
ಮತ್ತೆ ಲಾಭದತ್ತ ಭೂ ಅಭಿವೃದ್ಧಿ ಬ್ಯಾಂಕ್:
ಕಳೆದ 40 ವರ್ಷಗಳ ಬಳಿಕ ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಪ್ರಥಮ
ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿಯು ಕಳೆದ ಅವಧಿಯಲ್ಲಿ ರೂ 1.50 ಕೋಟಿ ಲಾಭ ದಾಖಲಿಸಿದ್ದರೆ, ಈ ಬಾರಿ ಮತ್ತೆ ರೂ 40 ಲಕ್ಷ ಲಾಭ ಗಳಿಸುವ ಮೂಲಕ ಸದಸ್ಯರಿಗೆ ಶೇ 7 ಡಿವಿಡೆಂಡ್ ನೀಡಲು ಸಾಧ್ಯವಾಗಿದೆ ಎಂದು ಅರುಣ್ ರೋಶನ್ ಡಿಸೋಜ ಹೇಳಿದ್ದಾರೆ.
ರಾಜ್ಯದಲ್ಲಿ ಕೇವಲ 20 ಭೂ ಅಭಿವೃದ್ಧಿ ಬ್ಯಾಂಕ್ ಮಾತ್ರ ಲಾಭ ಗಳಿಸಿದ್ದರೆ, ಜಿಲ್ಲೆಯ ಒಟ್ಟು 8 ಭೂ ಅಭಿವೃದ್ಧಿ ಬ್ಯಾಂಕಿನ ಪೈಕಿ ಬಂಟ್ವಾಳ ಮಾತ್ರ ಶೇ. 90ರಷ್ಟು ಸಾಲ ವಸೂಲಾತಿ ಸಹಿತ ಲಾಭ ದಾಖಲಿಸಿಕೊಂಡಿದೆ, ನಿರಂತರ 4ವರ್ಷಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ವಸೂಲಾತಿ ಸಾಧನೆಗಾಗಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನದ ಪ್ರಶಸ್ತಿ ಪಡೆಯಲು ಅರ್ಹವಾಗಿದೆ ಎಂದರು.
ಈ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ರೂ 7 ಕೋಟಿಗೂ ಮಿಕ್ಕಿ ಮೊತ್ತದ ಕೃಷಿಯೇತರ ಸಾಲವನ್ನು ಮರು ಪಾವತಿಸದ ಸುಸ್ತಿದಾರ ನಿರ್ದೇಶಕರಿಂದ ಕಾನೂನು ರೀತಿಯಲ್ಲಿ ಮರು ಪಾವತಿಗೊಳಿಸುವ ಮೂಲಕ ಬ್ಯಾಂಕ್ ಲಾಭ ಗಳಿಸಲು ಸಾಧ್ಯವಾಗಿದ್ದು, ಇಲ್ಲಿನ ಒಟ್ಟು 12 ಮಂದಿ ನಿರ್ದೇಶಕರ ಪೈಕಿ ಬಿಜೆಪಿ-8 ಮತ್ತು ಕಾಂಗ್ರೆಸ್ ಕೇವಲ 4 ಮಂದಿ ನಿರ್ದೇಶಕರನ್ನು ಹೊಂದಿದ್ದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಚಂದ್ರಶೇಖರ ಬಂಗೇರ, ಸುಂದರ ಪೂಜಾರಿ, ವಿಜಯಾನಂದ ಪೂಜಾರಿ, ಲಿಂಗಪ್ಪ ಪೂಜಾರಿ ಕುಕ್ಕಿಪಾಡಿ, ಲತಾ ರಘುನಾಥ ಸಪಲ್ಯ, ಲೋಲಾಕ್ಷಿ ರೈ ಇದ್ದರು.















