ಸಾವಿರಾರು ವರ್ಷಗಳ ಇತಿಹಾಸ, ಪುರಾತನ ಸಂಸ್ಕೃತಿಯನ್ನು ಹೊಂದಿರುವ ದೇಶ ಭಾರತ. 3 ಸಾವಿರಕ್ಕೂ ಅಧಿಕ ಮತ, ಜಾತಿ, ಭಾಷೆ, ವೇಷಭೂಷಣ ಹೊಂದಿದ್ದರೂ ಕೂಡಾ ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶಕ್ಕೆ ಬೇರೆ ದೇಶಗಳ ಹೋಲಿಕೆ ಅಸಾಧ್ಯ. ಎಲ್ಲೂ ಕಾಣದಿರುವ ವಿಶೇಷತೆಗಳು ನಮ್ಮ ದೇಶದಲ್ಲಿ ಮಾತ್ರ ಕಾಣಸಿಗುತ್ತದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ನುಡಿದರು.
ಶನಿವಾರ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಐದನೇ ದಿನ ನಂಬಿಕೆ ಮತ್ತು ಆಚರಣೆಗಳು ಎಂಬ ವಿಷಯದ ಬಗ್ಗೆ ಧಾರ್ಮಿಕ ಉಪನ್ಯಾಸ ನೀಡಿದರು.
ಮಾನವ ಧರ್ಮವೊಂದೇ ಮುಖ್ಯ. ಸನಾತನ ಹಿಂದೂ ಧರ್ಮ ಪ್ರಾಚೀನ ಧರ್ಮ. ಭಾರತೀಯ ಸಂಸ್ಕೃತಿಯ
ಪ್ರತೀಕ. ಎಲ್ಲದರಲ್ಲೂ ದೇವರನ್ನು ಕಾಣುವ ಧರ್ಮ. ಇಡೀ ಸಮಾಜ ನಂಬಿಕೆಗಳ ಆಧಾರದ ಮೇಲೆ ನಿಂತಿದೆ. ನಂಬಿಕೆಯೇ ಆಚರಣೆಗಳ ಮೂಲ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಗೌರವ ಸಲಹೆಗಾರರಾದ ಜನಾರ್ಧನ ಸಾಲ್ಯಾನ್ ಮುಂಡಾಜೆ ಉಪಸ್ಥಿತರಿದ್ದರು. ಚೇತನ್ ಮುಂಡಾಜೆ ಕಾರ್ಯಕ್ರಮ ನಿರ್ವಹಿಸಿದರು.














