ಬಂಟ್ವಾಳ: ಅಧಿಕಾರ ದುರ್ಬಳಕೆ, ಕುಟುಂಬ ರಾಜಕಾರಣವೇ ಕಾಂಗ್ರೆಸ್ ಸಾಧನೆಯಾಗಿದೆ,ರಾಜ್ಯದಲ್ಲಿ ಹಿಂದೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರಕ್ಕಾಗಿಯೇ ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸಿದ್ದು, ತುಷ್ಟೀಕರಣ, ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥನಾರಾಯಣ ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ ೫ನೇ ದಿನದ ಪಾದಯಾತ್ರೆಯ ಬಳಿಕ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಕಾಲಘಟ್ಟದಲ್ಲಿಯು ಬಿಜೆಪಿ ಮಾದರಿ ಸರಕಾರ ನಡೆಸಿದೆ. ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರಿಗೆ ಹೆಚ್ಚಿನ ಅದ್ಯತೆ ನೀಡಿದ್ದು, ಸರಳ, ಸಜ್ಜನಿಕೆಯ ಅವರು ಮತ್ತೊಮ್ಮೆ ಶಾಸಕರಾಗಿ ಸಚಿವರಾಗಿ ಬರಬೇಕು ಎಂದರು.
ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಅಭಿವೃದ್ಧಿಯಲ್ಲಿ ೧೦೦ ಶೇ. ಸಾಧನೆ ಮಾಡಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಸಲ್ಲುತ್ತಿದ್ದು, ನಾವು ಸಚಿವರಾಗಿ ಮಾಡದ ಸಾಧನೆಯನ್ನು ಅವರು ಶಾಸಕರಾಗಿ ಮಾಡಿ ತೋರಿಸಿದ್ದಾರೆ ಎಂದರು.
ರಾಜ್ಯ ಬಂದರು, ಮೀನುಗಾರಿಕಾ ಇಲಾಖೆ ಸಚಿವ ಎಸ್.ಅಂಗಾರ ಮಾತನಾಡಿ, ಜನತೆ ಪಕ್ಷಕ್ಕೆ ಅಧಿಕಾರ ನೀಡಿದ್ದು, ಅಭಿವೃದ್ಧಿ ಕಾರ್ಯಗಳ ಮೂಲಕ ಅದನ್ನು ಉಳಿಸಿಕೊಂಡು ಹೋಗಬೇಕು. ಮುಂದಿನ ಬಾರಿ ಯಾವುದೇ ಸಂಶಯವಿಲ್ಲದೆ ಬಂಟ್ವಾಳ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್
ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಪ್ರಾರಂಭದ ಚುನಾವಣೆಯಲ್ಲಿ ಸೋತರೂ ಮತ ನೀಡಿದ ೬೫ ಸಾವಿರ ಮಂದಿಗೆ ಕೃತಜ್ಞತೆ ಹೇಳಲು ಪ್ರಾರಂಭದ ಪಾದಯಾತ್ರೆ ನಡೆಸಿದ್ದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ ತೃಪ್ತಿ ಇದೆ ಎಂದರು.
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಸಹ ಸಂಚಾಲಕ ಮಾಧವ ಮಾವೆ, ನರಿಕೊಂಬು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್., ಬಂಟ್ವಾಳ ಬಿಜೆಪಿ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ,, ಬರಿಮಾರು ಗ್ರಾ.ಪಂ.ಅಧ್ಯಕ್ಷೆ ಶಶಿಕಲಾ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ,, ಬಾಳ್ತಿಲ ಗ್ರಾ.ಪಂ.ಅಧ್ಯಕ್ಷೆ ಹಿರಣ್ಮಯಿ, ಜಿಲ್ಲಾ ಮಾಧ್ಯಮ ಸಂಚಾಲಕ ಸಂದೇಶ್ ಶೆಟ್ಟಿ, ಜಿಲ್ಲಾ ಒಬಿಸಿ ಮೋರ್ಚಾದ ಮೋನಪ್ಪ ದೇವಸ್ಯ ಉಪಸ್ಥಿತರಿದ್ದರು.
ಪಾದಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಯವರು ಅನುದಾನಗಳ ವಿವರ ನೀಡಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಗೋಳ್ತಮಜಲು ಗ್ರಾ.ಪಂ.ಸದಸ್ಯ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಉಪಾಧ್ಯಕ್ಷ ವಜ್ರನಾಥ ಕಲ್ಲಡ್ಕ ವಂದಿಸಿದರು.














