ಬಂಟ್ವಾಳ: ಸಾತ್ವಿಕ ಆಹಾರ ಸೇವನೆಯ ಮೂಲಕ ಆರೋಗ್ಯವಂತರಾಗಿ ಬಾಳಬೇಕು. ಔಷಧಿಯನ್ನು ವೃತದಿಂದ ಸೇವಿಸಬೇಕು. ನಾವು ಸದೃಢರಾಗಿದ್ದರೆ ನಮ್ಮ ದೇಶ ಸದೃಢವಾಗಲಿದೆ. ಸರಕಾರ ಮಾಡುವ ಕಾರ್ಯದಲ್ಲಿ ಸೇವಾಂಜಲಿ ಪ್ರತಿಷ್ಠಾನ ಕೈ ಜೋಡಿಸಿದಂತೆ ಸೇವಾಂಜಲಿಯ ಸೇವಾ ಕಾರ್ಯದಲ್ಲಿ ನಾವೂ ಕೈ ಜೋಡಿಸೋಣ ಎಂದು ದ.ಕ.ಜಿಲ್ಲಾ ಕಸಾಪ ನಿಕಟಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನಡೆದ ಕ್ಷಯ ರೋಗಿಗಳಿಗೆ ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸರಕಾರದ ಯೋಜನೆಯನ್ನು ಸಮಾಜದ ಜನತೆಗೆ ತಲುಪಿಸುವ ಸೇವಾಂಜಲಿಯ ಕಾರ್ಯ ಅಭಿನಂದನೀಯ ಎಂದು ತಿಳಿಸಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿ ಕೆಮ್ಮು ಮೊದಲಾದ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಾಗ ವೈದ್ಯರಿಂದ ತಪಾಸಣೆ ನಡೆಸಿ ಔಷಧಿಯೊಂದಿಗೆ ಪೌಷ್ಟಿಕಾಹಾರ ಸೇವಿಸಿದಾಗ ರೋಗವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ
ಪ್ರಾಸ್ತಾವಿಕವಾಗಿ ಮಾತನಾಡಿ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕಿನ ಕ್ಷಯ ರೋಗಿಗಳನ್ನು ಗುರುತಿಸಿ ಪೌಷ್ಟಿಕಾಹಾರ ದ ಕಿಟ್ ನೀಡಲಾಗಿದೆ. ಇದು 44 ನೇ ತಿಂಗಳ ಕಾರ್ಯಕ್ರಮವಾಗಿದ್ದು ಈವರೆರೆ 225 ಮಂದಿ ಕ್ಷಯರೋಗಿಗಳಿಗೆ ದವಸ ಧಾನ್ಯ ವಿತರಿಸಲಾಗಿದ್ದು 15 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದರು.
ಸೇವಾಂಜಲಿಯ ಟ್ರಸ್ಟಿ, ಕೇಶವ ದೋಟ, ಉದಯ ಕುಮಾರ್ ಮಲ್ಲಿ ವೇದಿಕೆಯಲ್ಲಿ ಇದ್ದರು. ಪ್ರಮುಖರಾದ ಚಂದ್ರಹಾಸ ಕಡೆಗೋಳಿ, ವಿಕ್ರಂ ಫರಂಗಿಪೇಟೆ, ವಿಜೇತ್ ತುಂಬೆ, ಶಿವರಾಜ್ ಸುಜೀರ್, ದಿನೇಶ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.














