ತಮ್ಮ ಬೇಡಿಕೆಗಳನ್ನು ಈಡೇರಿಸದ ಕಾರಣ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಬ್ಯಾಂಕ್ ನೌಕರರು ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯಸ್ಸ್ ಒಕ್ಕೂಟವು ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ನಿರ್ಧರಿಸಿದೆ.
ಈ ತಿಂಗಳ ಅಂತ್ಯದಲ್ಲಿ ಬ್ಯಾಂಕ್ ವ್ಯವಹಾರಗಳಿಗೆ ತೊಡಕಾಗುವ ಸಾಧ್ಯತೆಗಳಿವೆ. ಏಕೆಂದರೆ, ಜನವರಿ 30 ಮತ್ತು 31ರಂದು ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಮುಂಬಯಿನಲ್ಲಿ ನಡೆದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಸಭೆಯಲ್ಲಿ ಬಂದ್ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ.ಭಾರತೀಯ ಬ್ಯಾಂಕ್‌ಗಳ ಸಂಘದಿಂದ (ಐಬಿಎ) ನಮ್ಮ ಬೇಡಿಕೆಗಳ ಕುರಿತಾಗಿ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ನಮ್ಮ ಧರಣಿಯನ್ನು ಮತ್ತೆ ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ.ಬ್ಯಾಂಕ್ ಸಿಬ್ಬಂದಿಯ ಎರಡು ದಿನಗಳ ಮುಷ್ಕರದಿಂದಾಗಿ ಜನವರಿ ಅಂತ್ಯದಲ್ಲಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿವೆ. ಜನವರಿ 28 ನಾಲ್ಕನೇ ಶನಿವಾರವಾಗಿದ್ದು, ಈ
ದಿನ ದೇಶಾದ್ಯಂತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಜನವರಿ 29 ಭಾನುವಾರ ಕೂಡ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ ಇರುತ್ತದೆ. ಇದಾದ ಬಳಿಕ ಜ. 30 ಮತ್ತು 31ರಂದು ಬ್ಯಾಂಕ್ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಒಟ್ಟು ನಾಲ್ಕು ದಿನ ಬ್ಯಾಂಕ್‌ಗಳು ಬಂದ್ ಆಗಲಿದ್ದು, ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕ್ ಸೇವೆಗಳಿಗೆ ಅಷ್ಟೇನೂ ತೊಡಕಾಗುವುದಿಲ್ಲ. ಎಟಿಎಂಗಳಲ್ಲಿ ಹಣದ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎನ್ನಲಾಗಿದೆ.
ನೌಕರರ ಬೇಡಿಕೆಗಳೇನು?
ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ಕೆಲಸ ಜಾರಿಯಾಗಬೇಕು.
ಬ್ಯಾಂಕ್ ನೌಕರರ ಪಿಂಚಣಿ ನವೀಕರಣ ಮಾಡಬೇಕು.
ಬಾಕಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸಬೇಕು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ರದ್ದುಗೊಳಿಸಿ
ವೇತನ ಪರಿಷ್ಕರಣೆ ಮತ್ತು ಎಲ್ಲಾ ಕೇಡರ್‌ಗಳಲ್ಲಿ ಸಮರ್ಪಕ ನೇಮಕಾತಿ ಮಾಡಬೇಕು.














