ಬಂಟ್ವಾಳ :ಇಲ್ಲಿನ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಚ್ಚಾರಿತ್ರ್ಯದಿಂದ ಕಳೆದ 30 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದು, ಇವರ ವಿರುದ್ಧ ಅನಗತ್ಯ ಅಪಪ್ರಚಾರ ನಡೆಸುತ್ತಿರುವ ಬಿಜೆಪಿ ಕೂಡಲೇ ಸಿಬಿಐ ತನಿಖೆ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ , ವಕೀಲ ಎಂ.ಚಂದ್ರಶೇಖರ ಪೂಜಾರಿ ಆಗ್ರಹಿಸಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕ್ಷುಲ್ಲಕ ವಿಚಾರಗಳಿಗೂ ಮಾಜಿ ಸಚಿವ ರೈ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಹಲವು ಪ್ರಕರಣಗಳಲ್ಲಿ ಅವರ ಹೆಸರನ್ನು ಥಳಕು ಹಾಕಿ ಅವರ ತೇಜೋವಧೆ ಮಾಡುವ ಪ್ರಯತ್ನ ಬಿಜೆಪಿ ಮುಂದುವರಿಸಿದರೆ ಕಾಂಗ್ರೆಸ್ ಪಕ್ಷ ಎಂದಿಗೂ ಸುಮ್ಮನಿರುವುದಿಲ್ಲ ಎಂದು
ಎಚ್ಚರಿಸಿದರು.
ಇಂಧನ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ದೇಶದ ಜನತೆ ಕಂಗಾಲಾಗಿದ್ದಾರೆ. ಹಿಂದುತ್ವದ ಜಪ ಮಾಡುತ್ತಿದ್ದ ಬಿಜೆಪಿ ರಾಜ್ಯದಲ್ಲಿ ದೇವಸ್ಥಾನ ಧ್ವಂಸಗೊಳಿಸಲು ಮುಂದಾಗಿದೆ ಎಂದು ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬೂಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ, ಜಗನ್ನಾಥ್ ತುಂಬೆ, ಲೋಕೇಶ್, ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು.















