ಬಂಟ್ವಾಳ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿ ಗುರುವಾರ ಸಾಧಾರಣ ಮಳೆ ಜೊತೆಗೆ ಬಿಸಿಲು ಕಾಣಿಸಿಕೊಂಡಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ 7.7 ಮೀ.ಗೆ ಏರಿಕೆಯಾಗಿದೆ.
ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದ್ದು ಗುರುವಾರ ಸಾಧಾರಣ ಮಳೆಯಾಗಿ ಕೆಲವೊಮ್ಮೆ ಬಿಸಿಲು ಕಾಣಿಸಿಕೊಂಡಿದೆ. ಅಂಗನವಾಡಿಯಿಂದ ಪಿಯುಸಿ ತನಕ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇಲ್ಲಿನ ಬಾಳ್ತಿಲ ಗ್ರಾಮದ ದಾಸಕೋಡಿ ಎಂಬಲ್ಲಿ ಗ್ರಾಮ ಪಂಚಾಯಿತಿ ರಸ್ತೆ ಬದಿ ಮಣ್ಣು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ಪಟ್ಟಿ ಅಳವಡಿಸಲಾಗಿದೆ. ಶಂಭೂರು ಗ್ರಾಮದ ಕೆಲೆಂಜಿಗುರಿ ಉಲ್ಲಾಸ್ ಫ್ಯಾಕ್ಟರಿ ತಡೆಗೋಡೆ ಕುಸಿದು ಸ್ಥಳೀಯ ಕೃಷಿಕ ದಿನೇಶ ಎಂಬವರ ಅಡಿಕೆ ತೋಟಕ್ಕೆ ಬಿದ್ದು ಹಾನಿಯಾಗಿದೆ. ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ಅಬ್ದುಲ್ ಖಾದರ್ ಇವರ ಮನೆ ಕುಸಿದ ಪರಿಣಾಮ ಮನೆಯವರನ್ನು ಸ್ಥಳಾಂತರಗೊಳಿಸಲಾಗಿದೆ. ಕಾವಳಪಡೂರು ಗ್ರಾಮ ಕಲಾಯಿ ಎಂಬಲ್ಲಿ ತೋಡಿನ ಕಾಲು ಸಂಕ ಕುಸಿದ ಪರಿಣಾಮ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಕೇಪು ಗ್ರಾಮದ ಕಟ್ಟೆ ಎಂಬಲ್ಲಿ ತಡೆಗೋಡೆ ಕುಸಿದು ಬಿದ್ದ ಪರಿಣಾಮ ನೀರ್ಕಜೆ-ಮಣಿಯರಪಾದೆ ರಸ್ತೆಯಲ್ಲಿ ಬಿರುಕು
ಕಾಣಿಸಿಕೊಂಡು ಸಂಚಾರ ಬಂದ್ ಮಾಡಲಾಗಿದೆ. ಮೇರಮಜಲು ಗ್ರಾಮದ ಅಬ್ಬೆಟ್ಟು ಪಾರಾಜೆ ಎಂಬಲ್ಲಿ ರಸ್ತೆಗೆ ಉರುಳಿ ಬಿದ್ದ ಮರವನ್ನು ತೆರವುಗೊಳಿಸಲಾಗಿದ್ದು, ಮೇರಮಜಲು ಗ್ರಾಮದ ಅಬ್ಬೆಟ್ಟು ಪಾರಾಜೆ ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದು ಬಿದ್ದಿದೆ.
ಕರಿಯಂಗಳ ಗ್ರಾಮದ ಕಲ್ಕುಟ ಎಂಬಲ್ಲಿ ಗುಡ್ಡ ಕುಸಿದು ಸ್ಥಳೀಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಮ್ಟಾಡಿ ಗ್ರಾಮದ ಕುಪ್ರಾಡಿ ಎಂಬಲ್ಲಿ ರಾಬಟ್ರ್ ಮಿನೇಜಸ್ ಎಂಬವರ ಜಮೀನಿನಲ್ಲಿ ಗುಡ್ಡ ಕುಸಿದು ತೋಡಿಗೆ ಮಣ್ಣು ಬಿದ್ದ ಪರಿಣಾಮ ಮಳೆನೀರು ಅಡಿಕೆ ತೋಟಕ್ಕೆ ನುಗ್ಗಿದೆ. ಪುರಸಭಾ ವ್ಯಾಪ್ತಿಯ ಮಂಡಾಡಿ ನಿವಾಸಿ ಸಂಜೀವ ಎಂಬವರ ಮನೆಗೋಡೆ ಮತ್ತು ಶೌಚಾಲಯ ಕುಸಿದು ಬಿದ್ದು ಹಾನಿಯಾಗಿದೆ. ಶಂಭೂರು ಗ್ರಾಮದ ಕೆದುಕೋಡಿ ರಸ್ತೆ ಬದಿ ಕುಸಿತ ಉಂಟಾಗಿದ್ದು, ಪೆರುವಾಯಿ ಗ್ರಾಮದ ಕೆದುವಾರು ಎಂಬಲ್ಲಿ ಕುದ್ದುಪದವು-ಪಕಳಕುಂಜ ಮುಖ್ಯರಸ್ತೆಗೆ ಗುಡ್ಡ ಕುಸಿದು ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.













