ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ದ. ಕ.ಜಿ.ಪಂ. ಕಿ ಪ್ರಾ ಶಾಲೆ ಏಮಾಜೆಯಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ನೂತನ ನಲಿ ಕಲಿ ತರಗತಿ ಕೊಠಡಿ "ಅಕ್ಷರದೀಪ -2022"ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಖಾಸಗಿ ಶಾಲೆಗಳನ್ನು ಮೀರಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ. ಶಾಲೆಯನ್ನು ಅಭಿವೃದ್ಧಿ ಪಥದೆಡೆಗೆ ಕೊಂಡೊಯ್ಯುವಲ್ಲಿ ಸಹಕರಿಸುತ್ತಿರುವ ಉರ್ದಿಲಗುತ್ತು ಶ್ರೀರಾಮ್ ಪ್ರಸಾದ್ ರವರ ಸಹಕಾರ ಹಾಗೂ ಶಾಲಾ ಮುಖ್ಯ ಶಿಕ್ಷಕಿ ಅವರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ. 2 ಕೊಠಡಿಗಳ ಬೇಡಿಕೆಗೆ ಸಹಕರಿಸುವ ಭರವಸೆಯನ್ನು ನೀಡಿದರು.
ಸುರೇಶ್ ರೈ ಕುರ್ಲೆತ್ತಿಮಾರು ಕಾರ್ಯಕ್ರಮ ಉದ್ಘಾಟಿಸಿದರು. ನೂತನ ಕಟ್ಟಡದ ದಾನಿಗಳ ನಾಮ ಫಲಕವನ್ನು ಗೌರವಾಧ್ಯಕ್ಷರಾದ ಜಯರಾಮ ರೈ ಅನಾವರಣಗೊಳಿಸಿದರು. ಕೈತೊಳೆಯುವ ಘಟಕವನ್ನು ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವ ಮಾವೆ ಉದ್ಘಾಟಿಸಿದರು.
ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಪೂಜಾರಿಯವರು ಶಾಲೆಗೆ ಬ್ಯಾಂಡ್ ಸೆಟ್ ಶಾಲೆಗೆ ಕೊಡುಗೆಯಾಗಿ ನೀಡಿದರು. ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿವೃತ್ತ ಲೆಕ್ಕಾಧಿಕಾರಿ ಸೋಮಪ್ಪ ಮಾದೇಲು ರವರು ರಾಷ್ಟ್ರನಾಯಕರ ಭಾವಚಿತ್ರಗಳನ್ನು ಶಾಲೆಗೆ ಸಮರ್ಪಿಸಿದರು. ಡಾ.ಅಶ್ವಿನ್ ಆಳ್ವ ರವರ ವತಿಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳ ವಿತರಿಸಲಾಯಿತು.
ಗ್ರಾಮ ಪಂಚಾಯತ್ ವತಿಯಿಂದ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಇಂಗುಗುಂಡಿಯನ್ನು ಗ್ರಾಮ ಪಂಚಾಯಿತ್ ಉಪಾಧ್ಯಕ್ಷೆ ಶಕೀಲಾ
ಕೃಷ್ಣ ಮಿತ್ತಕೋಡಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ವತಿಯಿಂದ ಶಾಲಾ ಪ್ರವೇಶ ದ್ವಾರದ ಬಳಿ ರಚನೆಯಾದ ಇಂಟರ್ ಲಾಕ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪೂಜಾರಿ ಉದ್ಘಾಟಿಸಿದರು. ಆವರಣಗೋಡೆಯನ್ನು ಗ್ರಾಮ ಪಂಚಾಯತ್ ಸದಸ್ಯರಾದ ಸಮಿತಾ.ಡಿ .ಪೂಜಾರಿರವರು ಉದ್ಘಾಟಿಸಿದರು.
ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಶಾಲಾ ಹಳೆ ವಿದ್ಯಾರ್ಥಿನಿ ಕುಮಾರಿ ಜಾಹ್ನವಿ ಯನ್ನು ಪ್ರತಿಬವಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ನೂತನ ತರಗತಿ ಕೊಠಡಿಗೆ ರಚನೆಗೆ ಸಹಕರಿಸಿದ ವಿವಿಧ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯರು , ಬಿ.ಆರ್ ಸಿ ಬಂಟ್ವಾಳದ ತಾಲೂಕು ಸಮನ್ವಯಾಧಿಕಾರಿ ರಾಘವೇಂದ್ರ ಬಲ್ಲಾಳ್ , ಮಾಣಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸತೀಶ್ ರಾವ್ ,ನೂತನ ತರಗತಿ ಕೊಠಡಿ ರಚನಾ ಸಮಿತಿಯ ಅಧ್ಯಕ್ಷರಾದ ಈಶ್ವರ ಭಟ್ , ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಮಲ್ಲಿಕಾ ಗಣೇಶ್ ಆಚಾರ್ಯ ,ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಸ್ವಾಗತಿಸಿ, ಅತಿಥಿ ಶಿಕ್ಷಕರಾದ ಅಕ್ಷತಾ ಕಾರ್ಯಕ್ರಮವನ್ನು ನಿರೂಪಿಸಿದರು.














