ಬಿ.ಸಿ.ರೋಡು: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಎಂಬ ಹೆಗ್ಗಳಿಕೆಯ "ಪಿಂಕ್ ಟಾಯ್ಲೆಟ್" ಬಂದ್

Coastal Bulletin
ಬಿ.ಸಿ.ರೋಡು: ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಎಂಬ ಹೆಗ್ಗಳಿಕೆಯ "ಪಿಂಕ್ ಟಾಯ್ಲೆಟ್" ಬಂದ್

ಬಂಟ್ವಾಳ: ಬಂಟ್ವಾಳ ಪುರಸಭೆಗೆ ಬಂದ ನಗರೋತ್ಥಾನ ಯೋಜನೆಯ ಅನುದಾನ ಬಳಸಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಮಹಿಳೆಯರಿಗೆಂದೇ ಮೀಸಲಾದ,ಬಿ.ಸಿ.ರೋಡಿನ ಅಡಳಿತ ಸೌಧದ ಬಳಿ ನಿರ್ಮಾಣಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಎಂಬ ಹೆಗ್ಗಳಿಕೆಯೊಂದಿಗೆ ಆರಂಭಗೊಂಡ "ಪಿಂಕ್ ಟಾಯ್ಲೆಟ್" ಇದೀಗ ಆರಂಭಗೊಂಡು ಒಂದೇ ವರ್ಷದಲ್ಲಿ ಬಾಗಿಲು ಹಾಕಿದೆ.

ಇದು ಕೇವಲ ಶೌಚಾಲಯಕ್ಕೆ ಮಾತ್ರ ಆಗಿರದೆ ಅದರಲ್ಲಿ ಮಕ್ಕಳಿಗೆ ಹಾಲುಣಿಸುವ ಕೊಠಡಿ, ಮಹಿಳೆಯರ ವಿಶ್ರಾಂತಿ ಕೊಠಡಿ, ಸ್ಯಾನಿಟರಿ ನ್ಯಾಪ್‌ಕಿನ್ ಮೊದಲಾದ ವ್ಯವಸ್ಥೆಗಳನ್ನು ಒಳಗೊಂಡಿತ್ತು.ಇದರ ನಿರ್ಮಾಣ ವೇಳೆ ಸಾಕಷ್ಟು ವಿವಾದಗಳು ನಡೆದಿದ್ದವು. 2023ರಲ್ಲಿ ನಿರ್ಮಾಣಗೊಂಡು, 2024ರಲ್ಲಿ ಇದು ಮಹಿಳೆಯರ ಬಳಕೆಗೆ ಲಭ್ಯವಾಗಿತ್ತು. 

ಮಹಿಳೆಯರ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಈ ವ್ಯವಸ್ಥೆಯನ್ನು ಬಂಟ್ವಾಳ ಪುರಸಭೆ ಖಾಸಗಿ ಸಂಸ್ಥೆಯೊಂದಕ್ಕೆ ನಿರ್ವಹಣೆಗೆ ನೀಡಿತ್ತು. ಆದರೆ ಅದನ್ನು ಉಪಯೋಗಿಸುವ ಮಹಿಳೆಯರ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ನಿರ್ವಹಣೆಯ ಸಮಸ್ಯೆ ತಲೆದೋರಿದ್ದಾಗಿ ಹೇಳಲಾಗಿದೆ. ಹೀಗಾಗಿ ಕಳೆದ ಹಲವು ಸಮಯಗಳಿಂದ ಶೌಚಾಲಯ ಮುಚ್ಚಿದೆ.

ಇದು ಬಿ.ಸಿ.ರೋಡ್ ನಗರದ ಮಧ್ಯದಲ್ಲಿಯೇ ಇರುವುದರಿಂದ ಮಹಿಳೆಯರು ಅಲ್ಲಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಾರೆ ఎంబ ಅಭಿಪ್ರಾಯವಿದ್ದು, ದಿನಕ್ಕೆ ಬೆರಳೆಣಿಕೆಯ ಮಂದಿ

ಬರುವುದರಿಂದ ನಿರ್ವಹಣೆ ಮಾಡುವ ಸಂಸ್ಥೆಗೂ ಹೊರೆಯಾಗುತ್ತಿದೆ.ಶೌಚಾಲಯದಲ್ಲಿ ನಿರ್ವಹಣೆ ಸಂಸ್ಥೆಯ ಒಬ್ಬರು ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಶೌಚಾಲಯ ಪ್ರತಿನಿತ್ಯವೂ ತೆರೆಯುತ್ತಿರಲಿಲ್ಲ,ಇದೀಗ ಕೆಲ ದಿನಗಳಿಂದ ಸಂಪೂರ್ಣ ಮುಚ್ಚಿದೆ.

ಪಿಂಕ್ ಶೌಚಾಲಯಕ್ಕೆ ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದರಿಂದ ಅದರ ನಿರ್ವಹಣೆ ಹೊರೆಯಾಗುತ್ತಿದೆ ಎನ್ನುವ ಕಾರಣಕ್ಕೆ ಅದರ ಪಕ್ಕದಲ್ಲಿರುವ ಜಾಗದಲ್ಲಿ ಪುರುಷರ ಶೌಚಾಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಯೋಜನೆ ಹಾಕಿದ್ದಾರೆ.

ಪಿಂಕ್ ಶೌಚಾಲಯವನ್ನು ಕಡಿಮೆ ಸಂಖ್ಯೆಯ ಮಹಿಳೆಯರು ಉಪಯೋಗ ಮಾಡುವುದರಿಂದ ನಿರ್ವಹಣೆಗೆ ತೊಂದರೆಯಾಗಿದ್ದು, ಮುಂದೆ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಪುರುಷರ ಉಪಯೋಗಕ್ಕೂ ಶೌಚಾಲಯ ನಿರ್ಮಾಣಗೊಂಡಲ್ಲಿ ನಿರ್ವಹಣೆಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗುತ್ತಿದೆ. 

ಬಿ.ವಾಸು ಪೂಜಾರಿ ಲೊರೆಟ್ಟೋ,

ಅಧ್ಯಕ್ಷ, ಬಂಟ್ವಾಳ ಪುರಸಭೆ.

Leave a Comment