ಬಂಟ್ವಾಳ :ಹಿಂದೂ ಧರ್ಮವು ಮೂಲ ನಂಬಿಕೆಯ ನೆಲೆಗಟ್ಟಿನಲ್ಲಿ ನೆಲೆನಿಂತ ಧರ್ಮ, ಹಿಂದೂ ಸಂಸ್ಕೃತಿ ಬಹಳ ಶ್ರೇಷ್ಠವಾದುದು, ಹೃದಯವನ್ನು ತೆರೆದು,ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುವ ಸಂಸ್ಕೃತಿ ನಮ್ಮದು. ನಮ್ಮ ಜಿಲ್ಲೆಯಲ್ಲಿ ಧಾರ್ಮಿಕ ನಂಬಿಕೆಗೆ ವಿಶೇಷ ಸ್ಥಾನವಿದೆ,ಭಗವಂತನ ಇಚ್ಛೆ ಇದ್ದಾರೆ ಮಾತ್ರ ಬ್ರಹ್ಮಕಲಶದಂತಹ ಪುಣ್ಯ ಕಾರ್ಯ ಸಿದ್ದಿಯಾಗಲು ಸಾಧ್ಯ ಅಂತಹ ಯೋಗ ಭಾಗ್ಯ ಈ ಭಾಗದ ಜನತೆಗೆ ಕೊಡಿಬಂದಿದೆ, ನಿಮ್ಮ ತ್ಯಾಗ ಹಾಗೂ ಅರ್ಪಣಾ ಮನೋಭಾವದ ಪರಿಶ್ರಮಕ್ಕೆ ಶಿವನು ಸಂತುಷ್ಟ್ಟಗೊಂಡಿದ್ದಾನೆ ಎಂದು ನಾನು ನಂಬಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ನೂತನವಾಗಿ ನಿರ್ಮಾಣಗೊಂಡ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.15ರಂದು ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ದೀಪ ಪ್ರಜ್ವಲಿಸಿ,ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಉದ್ಯಮಿ ಪ್ರಕಾಶ ಕಾರಂತ ನರಿಕೊಂಬು ವಹಿಸಿದ್ದರು, ವೇದಿಕೆಯಲ್ಲಿ ಉದ್ಯಮಿ ಬಿಪಿನ್ ರೈ ಮಂಗಳೂರು,ಭಾರತ್ ಆಗ್ರೋವೇಟ್ ಲಿ ಆಡಳಿತ ನಿರ್ದೇಶಕ ಡಾ.ಅರುಣ್ ಕುಮಾರ್ ರೈ, ಓರಿಯೆಂಟಲ್ ಇನ್ಶೂರೆನ್ಸ್ ನಿವೃತ್ತ ರೀಜಿನಲ್ ಮ್ಯಾನೇಜರ್ ಬಿ ಸುಧಾಕರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ
ಕುಂದರ್,ಜಿಲ್ಲಾ ಕಾಂಗ್ರೆಸ್ ಸಹಕಾರಿ ಘಟಕದ ಅಧ್ಯಕ್ಷ ಸುದರ್ಶನ್ ಜೈನ್, ಮಹೇಶ್ ಭಟ್ ಮಾಜಿ ಟ್ರಸ್ಟಿ ಶ್ರೀ ಕ್ಷೇತ್ರ ಸುಬ್ರಮಣ್ಯ, ಜೀರ್ಣೋದ್ದಾರ ಹಾಗೂ ಬ್ರಹ್ಮಕಲಸ ಸಮಿತಿಯ ಅಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ, ರಾಮಚಂದ್ರ ಸುವರ್ಣ ತುಂಬೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಪ್ರಚಾರ ಸಮಿತಿ ಸಂಚಾಲಕ ಪ್ರವೀಣ್ ಬಿ ತುಂಬೆ ಸ್ವಾಗತಿಸಿ, ಶಶಿಧರ ಬ್ರಹ್ಮರಕೊಟ್ಲು ಧನ್ಯವಾದವಿತ್ತರು,ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.









