ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ ಪೊಸಳ್ಳಿ ಇದರ ಆಶ್ರಯದಲ್ಲಿ ಅವಿಭಜಿತ ಜಿಲ್ಲೆಯ ಕುಲಾಲ ಸಂಘಗಳ ಸಾಂಸ್ಕೃತಿಕ ಸಂಭ್ರಮ ಕಲಾವಳಿ - 2024 ಜ.21ರಂದು ರವಿವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ್ ಹೇಳಿದರು.
ಅವರು ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಹಿರಿಯ ರಂಗ ನಟ ನಿರ್ದೇಶಕ ರಮಾ ಬಿ.ಸಿ.ರೋಡು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಈ ಸಂದರ್ಭದಲ್ಲಿ ಚಲನ ಚಿತ್ರ ನಟ ಮನೋಜ್ ಪುತ್ತೂರು ಉಪಸ್ಥಿತರಿರುವರು ಎಂದರು.
ಸಭಾ ಕಾರ್ಯಕಮವು ಮದ್ಯಾಹ್ನ 12ಕ್ಕೆ ನಡೆಯಲಿದ್ದು ಅಧ್ಯಕ್ಷತೆಯನ್ನು ತಾಲೂಕು ಕುಲಾಲ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ, ಮಾಜಿ ಸಚಿವ ಬಿ. ರಮಾನಾಥ ರೈ, ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಪ್ರಮುಖರಾದ ಗಿರೀಶ್ ಬಿ.ಸಾಲ್ಯಾನ್, ಸುನೀಲ್ ಆರ್. ಸಾಲ್ಯಾನ್, ಮಯೂರ್ ಉಳ್ಳಾಲ್, ವಿಠಲ ಕನ್ನಿರ್ ತೋಟ ಭಾಗವಹಿಸುವರು, ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಂ. ಅಣ್ಣಯ್ಯ ಕುಲಾಲ್, ಪ್ರೇಮಾನಂದ ಕುಲಾಲ್, ಪುರುಷೋತ್ತಮ ಕುಲಾಲ್ ಕಲ್ಪಾವಿ, ದಿನೇಶ್ ಕುಲಾಲ್, ಅನಿಲ್ ದಾಸ್, ಮಮತಾ ಗುಜರನ್, ಸುಧಾಕರ ಎನ್. ಸಾಲ್ಯಾನ್ ಸಹಿತ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಅವಿಭಜಿತ ಜಿಲ್ಲೆಯ ನೊಂದಾಯಿತ ಕುಲಾಲ ಸಂಘಗಳು ಪಾಲ್ಗೊಳ್ಳು ವಿಕೆಯಲ್ಲಿ ಸಾಂಸ್ಕೃತಿಕ ಸಂಭ್ರಮ ಕಲಾವಳಿ -
2024 ಕಾರ್ಯಕ್ರಮ ನಡೆಯಲಿದ್ದು,ವಿಜೇತ ತಂಡಗಳಿಗೆ ನಗದು ಸಹಿತ ಟ್ರೋಫಿ ನೀಡಲಾಗುವುದು, ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೂ 5 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ಪೊಸಳ್ಳಿಯಲ್ಲಿ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಈ ಕಾರ್ಯಕ್ರಮದ ಮೂಲಕ ಉಳಿಕೆಯಾಗುವ ಹಣವನ್ನು ಈ ಕಾಮಗಾರಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದ ಅವರು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ ಕಳೆದ 45 ವರ್ಷಗಳಿಂದ ನಿರಂತರ ಸಮುದಾಯದ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಬಡಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಬಡ ಜನರಿಗೆ ಆರ್ಥಿಕ ಸಹಕಾರ ನೀಡುತ್ತಾ ಬಂದಿದೆ. ಇದೀಗ ಮೊದಲ ಬಾರಿಗೆ ಅವಿಭಜಿತ ಜಿಲ್ಲೆಯ ಕುಲಾಲ ಬಂಧುಗಳಿಗೆ ಸಾಂಸ್ಕೃತಿಕ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ಕೇಶವ ಮಾಸ್ತರ್, ಕೋಶಾಧಿಕಾರಿ ರಮೇಶ್ ಸಾಲ್ಯಾನ್, ಕಾರ್ಯಕ್ರಮದ ಪ್ರಧಾನ ಸಂಚಾಲಕ ದಾಮೋದರ್ ಏರ್ಯ, ಜೊತೆ ಕಾರ್ಯದರ್ಶಿ ಜಲಜಾಕ್ಷಿ ಕುಲಾಲ್, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ ಪದ್ಮನಾಭ, ಸದಸ್ಯರಾದ ಮಚ್ಚೇಂದ್ರ ಸಾಲ್ಯಾನ್, ನಾರಾಯಣ ಸಿ.ಪೆರ್ನೆ, ಸತೀಶ್ ಕುಲಾಲ್ ಉಪಸ್ಥಿತರಿದ್ದರು.














