ಬಂಟ್ವಾಳ: ಹಾಡು ಹಗಲೇ ಮನೆಯಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾ. ಅರಳ ಗ್ರಾಮದ ಶುಂಠಿಹಿತ್ಲು ನಿವಾಸಿ ಆಶ್ರಫ್ (42) ಬಂಧಿತ ಆರೋಪಿಯಾಗಿದ್ದಾನೆ.ಖಚಿತ ಮಾಹಿತಿಯನ್ನಾಧರಿಸಿ ಸೋರ್ನಡು ಎಂಬಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜನವರಿ 31 ರಂದು ಅರಳ ಗ್ರಾಮದ ಪೋರ್ಕಳ ನಿವಾಸಿ ಅಬ್ದುಲ್ ರಹಮಾನ್ ಎಂಬವರ ಮನೆಯಲ್ಲಿ ಹಾಡು ಹಗಲೇ ಕಳವು ಕೃತ್ಯ ನಡೆದಿತ್ತು.
ಈ ಸಂದರ್ಭ ಮನೆಯೊಳಗೆ ನುಗ್ಗಿದ್ದ ಕಳ್ಳರು ಕೋಣೆಯಲ್ಲಿದ್ದ ಗೊದ್ರೇಜ್ ಕಪಾಟಿನ ಬೀಗ
ಮುರಿದು 2 ಲಕ್ಷ ಮೌಲ್ಯದ 5.50 ಪವನ್ ನೆಕ್ಲೆಸ್ ಸರವನ್ನು ಕಳವುಗೈದು ಪರಾರಿಯಾಗಿದ್ದರು.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಟ್ವಾಳ ಉಪವಿಭಾಗದ ಡಿ.ವೈಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ಮಾರ್ಗದರ್ಶನ ದಲ್ಲಿ, ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್.ಐ.ಗಳಾದ ಹರೀಶ್ , ಸಂಜೀವ ಮತ್ತವರ ತಂಡ ಕಾರ್ಯಚರಣೆ ನಡೆಸಿತ್ತು ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿಲಾಗಿದೆ.














