ಬಂಟ್ವಾಳ: ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ೧.೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಶಾಲೆಯ ಮೂರನೇ ಹಂತದ ಕಟ್ಟಡ ಕಾಮಗಾರಿಯ ಉದ್ಘಾಟನಾ ಸಮಾರಂಭ ಮುಂದಿನ ಮೇ.೭ ಮತ್ತು ಮೇ ೮ ರಂದು ನಡೆಯಲಿದೆ.
ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಶಾಲೆಯಲ್ಲಿ ನಡೆದ ಟ್ರಸ್ಟಿನ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಮುಂದಾಳತ್ವದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಹಿತ ಕೇಂದ್ರ ಹಾಗೂ ರಾಜ್ಯದ ಸಚಿವರು, ವಿವಿಧ ಕ್ಷೇತ್ರಗಳ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಎರಡು ದಿನಗಳಲ್ಲಿ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನಾ ಸಮಾರಂಭ ವಿಜ್ರಂಭಣೆಯಿಂದ ನೆರವೇರಲಿದ್ದು ಪೂರ್ವಭಾವಿ
ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಶಾಲೆಯ ಮೂರನೇ ಹಂತದ ಕಟ್ಟಡವಾದ ೧೧ ತರಗತಿ ಕೋಣೆಗಳು, ವಿಶಾಲವಾದ ಕಲಿಕಾಭವನ (ಸಭಾಂಗಣ) ಈ ಸಂದರ್ಭ ಉದ್ಘಾಟನೆಗೊಳ್ಳಲಿದೆ. ಸಭೆಯಲ್ಲಿ ಟ್ರಸ್ಟ್ ಸದಸ್ಯರಾದ ಪುರುಷೋತ್ತಮ ಅಂಚನ್, ಸಂದೀಪ್ ಸಾಲ್ಯಾನ್, ರಾಮಚಂದ್ರ ಪೂಜಾರಿ ಕರೆಂಕಿ, ಪೂವಪ್ಪ ಮೆಂಡನ್, ನವೀನ್ ಸೇಸಗುರಿ, ಬಾಲಕೃಷ್ಣ ಜಿ., ಕರುಣಾಕರ ಕುಲಾಲ್ ಕರೆಂಕಿ, ಪ್ರಶಾಂತ್ ಪೂಜಾರಿ, ಮಹೇಶ್ ಡೆಚ್ಚಾರ್, ಜಗದೀಶ್ ಕುಲಾಲ್, ಅಶ್ವತ್ ಡೆಚ್ಚಾರ್, ಪ್ರವೀಣ್ ಜಿ. ಸೇಸಗುರಿ, ದಿನೇಶ್ ಪೂಜಾರಿ, ಸುಂದರ ಗೌಡ, ಉದಯ ಕರೆಂಕಿ, ಧನುಷ್, ವಿನಯ್, ನವೇಶ್, ದಿಲೀಪ್ ಉಪಸ್ಥಿತರಿದ್ದರು.














