ಬಂಟ್ವಾಳ: ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇಲ್ಲದೆ ಕೇವಲ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಎಲ್ಲಾ ಸಹಕಾರಿಗಳ ಪರಿಶ್ರಮದಿಂದ ಜಿಲ್ಲೆಯ ಸಹಕಾರಿ ಕ್ಷೇತ್ರವು ರಾಜ್ಯ ಮಟ್ಟದಲ್ಲಿ ಮುಂಚೂಣಿಯಲ್ಲಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಇವರಿಗೆ ಸಾರ್ವಜನಿಕ ಅಭಿನಂದನೆ ಸಮರ್ಪಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ವೇಳೆ ಟಿ.ಜಿ.ರಾಜಾರಾಮ ಭಟ್ ಮತ್ತು ಜ್ಯೋತಿ ರಾಜಾರಾಮ ಭಟ್ ಇವರನ್ನು ಅಭಿನಂದಿಸಲಾಯಿತು. ಬಳಿಕ ಮಾತನಾಡಿ ಸಹಕಾರಿ ಚಳುವಳಿಯಲ್ಲಿ ನನಗೆ ಬೆಂಬಲ ನೀಡಿದವರು ಎಂ.ಎನ್. ರಾಜೇಂದ್ರ ಕುಮಾರ್. ಅವರಿಂದ ಸ್ವೀಕರಿಸಿದ ಸನ್ಮಾನದ ಈ ದಿನ ನನ್ನ ಜೀವನದ ಉತೃಷ್ಟವಾದ ದಿನ .ಯುವ ಜನರು ಸಹಕಾರಿ ಸಂಘಕ್ಕೆ ಬರಲು ಇದು ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ರತ್ನ ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕಾಮಧೇನು ನವೋದಯ ಸಸ್ವಸಹಾಯ ಸಂಘದ ಸದಸ್ಯೆ ಸುಜಾತ ಅವರಿಗೆ 25 ಸಾವಿರ ರೂಪಾಯಿಗಳ
ಆರ್ಥಿಕ ನೆರವಿನ ಚೆಕ್ ನೀಡಲಾಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಸ್ಕ್ವ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಶುಭ ಹಾರೈಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಜಯರಾಮ ರೈ, ಸದಾಶಿವ ಉಳ್ಳಾಲ್, ಕೋಶಾಧಿಕಾರಿ ಅಜಯ್ ಕುಮಾರ್ ಅಜಿಲ ಮತ್ತಿತರರು ಇದ್ದರು.
ಅಭಿನಂದನಾ ಸಮಿತಿ ಗೌರವಾಧ್ಯಕ್ಷ , ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಪ್ರಾಸ್ತಾವಿಕ ಮಾತನಾಡಿದರು.
ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಸ್ವಾಗತಿಸಿ, ಸುಭಾಶ್ಚಂದ್ರ ಜೈನ್ ವಂದಿಸಿದರು. ಪುಷ್ಪರಾಜ್ ಕುಕ್ಕಾಜೆ ಸನ್ಮಾನಪತ್ರ ವಾಚಿಸಿದರು. ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕ ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.










