ಬಂಟ್ವಾಳ: ಇಲ್ಲಿನ ಪುರಾಣ ಪ್ರಸಿದ್ದ ಕಾರಿಂಜ ಕ್ಷೇತ್ರಕ್ಕೆ ಧಕ್ಕೆ ತರುತ್ತಿರುವ ಮೂರು ಅಕ್ರಮ ಜೆಲ್ಲಿ ಗಣಿಕಾರಿಕೆ ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಿ ಮೂರನೇ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಈಗಾಗಲೇ ಕಾರಿಂಜ ಕ್ಷೇತ್ರ ಮತ್ತು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದರೂ ಗಣಿ ಇಲಾಖೆ ಸಹಿತ ಜಿಲ್ಲಾಡಳಿತ ಮತ್ತು ಸರ್ಕಾರ ಮೌನವಾಗಿದೆ' ಎಂದು ಅವರು ಆರೋಪಿಸಿದರು.
ಇದೇ 14ರಿಂದ 21ರತನಕ ಕಾರಿಂಜೇಶ್ವರ ಕ್ಷೇತ್ರ ಸಂರಕ್ಷಣಾ ಸಮಿತಿ ಮತ್ತು ಹಿಂದೂ ಜಾಗರಣ ಸಮಿತಿ ವತಿಯಿಂದ 'ಮನೆ ಸಂಪರ್ಕ ಜನ ಜಾಗರಣ ಅಭಿಯಾನ' ಹಮ್ಮಿಕೊಂಡಿದ್ದು, ಒಂದು ಲಕ್ಷ ಸಹಿ ಸಂಗ್ರಹಿಸಿ ರಾಜ್ಯಪಾಲರು ಸಹಿತ ಮುಖ್ಯಮಂತ್ರಿ ಮತ್ತು ಮುಜರಾಯಿ ಖಾತೆ ಸಚಿವರಿಗೆ
ಮನವಿ ಸಲ್ಲಿಸಲಾಗುವುದು ಎಂದರು.
ಮುಂದಿನ ದಿನದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು ಸಹಿತ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಂಘ ಪರಿವಾರದ ಎಲ್ಲಾ ಸಂಘಟನೆಗಳನ್ನು ಒಟ್ಟು ಸೇರಿಸಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಶಿವರಾತ್ರಿ ದಿನ ಶಿವ ಮಾಲಾಧರಣೆ ಮೂಲಕ ಕಾರಿಂಜ ಕ್ಷೇತ್ರ ಯಾತ್ರೆ ಮತ್ತು ಕಾನೂನು ಹೋರಾಟ ಮತ್ತು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಸಿದರು
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ನರಸಿಂಹ ಶೆಟ್ಟಿ ಮಾಣಿ, ಜಗದೀಶ ನೆತ್ತರಕೆರೆ, ಯೋಗೀಶ್ ಕುಮ್ಡೇಲು ಉಪಸ್ಥಿತರಿದ್ದರು.













